ADVERTISEMENT

ದೇವನಹಳ್ಳಿ | ಮುಸುಕಿನ ಜೋಳ ಬೆಳೆಗೆ ಹುಳು ಕಾಟ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:01 IST
Last Updated 27 ಜೂನ್ 2024, 14:01 IST
ವಿಜಯಪುರ  ರೈತ ಶಾಮಣ್ಣ ಅವರಿಗೆ ಸೇರಿದ ಮುಸುಕಿನ ಜೋಳದ ಬೆಳೆಯಲ್ಲಿ ಗರಿಗಳನ್ನು ಸೈನಿಕ ಹುಳುಗಳು ತಿಂದಿರುವುದು
ವಿಜಯಪುರ  ರೈತ ಶಾಮಣ್ಣ ಅವರಿಗೆ ಸೇರಿದ ಮುಸುಕಿನ ಜೋಳದ ಬೆಳೆಯಲ್ಲಿ ಗರಿಗಳನ್ನು ಸೈನಿಕ ಹುಳುಗಳು ತಿಂದಿರುವುದು    

ವಿಜಯಪುರ(ದೇವನಹಳ್ಳಿ): ಮುಂಗಾರು ಮಳೆ ವಿಳಂಬವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆಷಾಢ ಗಾಳಿ ಜೋರಾಗಿ ಬೀಸಲಾರಂಭಿಸಿದೆ. ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳು ದಾಳಿ ಇಟ್ಟಿದೆ. ನೋಡ ನೋಡುತ್ತಿದ್ದಂತೆ ಬೆಳೆಯುತ್ತಿರುವ ಬೆಳೆ ನಾಶ ಮಾಡುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾವಿರಾರು ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ರೈತರು, ಕೊಳವೆ ಬಾವಿಗಳನ್ನೇ ನೀರಿನ ಮೂಲವಾಗಿ ನಂಬಿಕೊಂಡು ತೋಟಗಳಲ್ಲಿ ಬಿತ್ತನೆ ಮಾಡಿರುವ ಬೆಳೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಆದರೆ, ಬೆಳೆ ಕೈಗೆ ಬರುವ ಮೊದಲೇ ಕಾಡುತ್ತಿರುವ ಸೈನಿಕ ಹುಳು, ಗರಿ ಸಂಪೂರ್ಣವಾಗಿ ತಿನ್ನಲಾರಂಭಿಸಿದೆ. ಮುಸುಕಿನ ಜೋಳ ಬಿತ್ತನೆ ಮಾಡಿದ ನಂತರ ಒಂದೇ ತಿಂಗಳಲ್ಲೇ ಗರಿಗಳು ಸೈನಿಕ ಹುಳು ಹಾವಳಿಗೆ ತುತ್ತಾಗುತ್ತಿವೆ. ಹುಳಗಳು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳಭಾಗದಲ್ಲಿ ಇರುತ್ತದೆ. ಸಂಜೆ ಅಥವಾ ರಾತ್ರಿ ಇವು ಕ್ರಿಯಾಶೀಲವಾಗುತ್ತಿವೆ. ಮುಸುಕಿನ ಜೋಳದ ಎಲೆ ಮತ್ತು ತೆನೆ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕತ್ತರಿಸುವುದು ಕಂಡು ಬರುತ್ತಿದೆ. ತೀವ್ರವಾಗಿ ಹಾನಿಗೆ ಒಳಗಾದ ಬೆಳೆಯಲ್ಲಿ ಎಲೆ ದಿಂಡು ಮಾತ್ರ ಉಳಿದಿರುತ್ತದೆ. ಉಳಿದೆಲ್ಲ ಭಾಗ ತಿನ್ನುತ್ತಿವೆ.

ರೈತರು ತಾವು ಬೆಳೆ ಬೆಳೆದಿರುವ ಜಮೀನಿನ ಸುತ್ತಲೂ ಒಂದು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವುದರಿಂದ ಹಗಲಿನಲ್ಲಿ ಹುಳಗಳ ಮರಿಗಳು ಬಂದು ಶೇಖರಣೆಯಾಗುತ್ತವೆ. ಗುಂಡಿಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮರಿಗಳನ್ನು ನಾಶಪಡಿಸಬಹುದು. ಸಂಜೆ 5.30ರ ನಂತರ ಕ್ಲೋರೊಪೈರಿಫಾಸ್‌ ಮತ್ತು ಸೈಪರ್‌ಮೆತ್ರಿನ್‌ (ಆಮ್ಲಾ) ಎಂಬ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ 2.0 ಮಿ.ಲೀ.ನಂತೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಸಿಂಪರಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡುವುದರಿಂದ ಸೈನಿಕ ಹುಳಗಳನ್ನು ನಾಶಪಡಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT
ಜೋಳದ ಗರಿಗಳಲ್ಲಿ ಅಡಗಿರುವ ಸೈನಿಕ ಹುಳುಗಳು.

ಹುಳು ಹಾವಳಿ ವಿಪರೀತ ಸೈನಿಕ ಹುಳುವಿನ ಹಾವಳಿ ವಿಪರೀತವಾಗಿದೆ. ಇವತ್ತು ರಾತ್ರಿ ಇದ್ದ ಗಿಡ ನಾಳೆ ಬೆಳಗ್ಗೆ ನಾಶವಾಗಿರುತ್ತದೆ. ಮಳೆ ಇಲ್ಲದಿದ್ದರೂ ಕೊಳವೆಬಾವಿಯಲ್ಲಿನ ನೀರು ನಂಬಿಕೊಂಡು ಕಷ್ಟಪಟ್ಟು ಜೋಳ ಬಿತ್ತನೆ ಮಾಡಿದ್ದೇವೆ. ಫಸಲು ಕೈಸೇರುತ್ತದೋ ಇಲ್ಲವೋ ಎನ್ನುವ ಆತಂಕ ಈಗ ಎದುರಾಗಿದೆ. ಶಾಮಣ್ಣ ರೈತ ಚಿಕ್ಕತತ್ತಮಂಗಲ ಇನ್ನೂ ರಾಗಿ ಬಿತ್ತನೆ ಆಗಿಲ್ಲ ಸೈನಿಕ ಹುಳುಗಳು ಕಳೆದ ವರ್ಷದಲ್ಲಿ ರಾಗಿ ಬೆಳೆಯಲ್ಲಿ ಕಾಣಿಸಿಕೊಂಡಿದ್ದವು. ಮಳೆ ಕೊರತೆಯಿಂದ ಇನ್ನೂ ರಾಗಿ ಬಿತ್ತನೆಯಾಗಿಲ್ಲ. ಈಗ ಮುಸುಕಿನ ಜೋಳದ ಬೆಳೆಯಲ್ಲಿ ಕಾಣಿಸಿಕೊಂಡು ಬೆಳೆ ನಾಶ ಮಾಡುತ್ತಿವೆ. ಇದರ ಜತೆಗೆ ರಾಸುಗಳಿಗಾಗಿ ಬೆಳೆಸಿರುವ ಸೀಮೆಹುಲ್ಲಿಗೂ ಸೈನಿಕ ಹುಳುವಿನ ಕಾಟ ಆರಂಭವಾಗಿದೆ. ನಾಗರಾಜ್ ರೈತ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.