ADVERTISEMENT

ವಿಜಯಪುರ(ದೇವನಹಳ್ಳಿ): ಬೀದಿನಾಯಿ ಹಿಡಿಯುವರು ಯಾರು?

ವಿಜಯಪುರದಲ್ಲಿ ದಿನಕ್ಕೆ ಐದಾರು ಮಂದಿಗೆ ಕಡಿತ l ನಾಲ್ಕೂ ಟೆಂಡರ್‌ಗೆ ಸಿಗದ ಸ್ಪದಂನೆ

ಎಂ.ಮುನಿನಾರಾಯಣ
Published 10 ಅಕ್ಟೋಬರ್ 2024, 4:06 IST
Last Updated 10 ಅಕ್ಟೋಬರ್ 2024, 4:06 IST
   

ವಿಜಯಪುರ(ದೇವನಹಳ್ಳಿ): ನಾಯಿ ಹಿಡಿಯುವವರು ಯಾರು?.

ಇಂಥಹದೊಂದು ಪ್ರಶ್ನೆ ವಿಜಯಪುರ ಪುರಸಭೆಯನ್ನು ಹಲವು ವರ್ಷಗಳಿಂದ ಕಾಡುತ್ತಿದೆ. ಪಟ್ಟಣದಲ್ಲಿ ನಾಯಿಗಳ ಕಾಟ ಮೀತಿ ಮೀರಿದೆ. ನಾಯಿಗಳನ್ನು ಹಿಡಿಯಲು ಪುರಸಭೆ ಹಲವು ಬಾರಿ ಟೆಂಡರ್‌ ಕರೆದರೂ ಭಾಗವಹಿಸಲು ಯಾರು ಮುಂದೆ ಬರುತ್ತಿಲ್ಲ.

ಹೋಬಳಿಯಲ್ಲಿ ಬೀದಿನಾಯಿಗಳ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಚೆಗೆ ಬೀದಿನಾಯಿಗಳ ಕಡಿತಕ್ಕೆ ಒಳಗಾಗುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ದಿನಕ್ಕೆ 2-3 ಮಂದಿ ಬರುತ್ತಿದ್ದರು. ಈಗ 5-6 ಮಂದಿ ಬರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ಪಟ್ಟಣ ಅಲ್ಲದೆ ಹಳ್ಳಿಗಳಿಂದಲೂ ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ನಮ್ಮಲ್ಲಿ ಸ್ಥಳೀಯರು ಕಡಿತಕ್ಕೆ ಒಳಗಾದರೆ ಮಾತ್ರವೇ ಚುಚ್ಚುಮದ್ದು ಕೊಡಬಹುದು. ಹೊರಗಿನವರೂ ಬಂದು ಚುಚ್ಚುಮದ್ದು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮಲ್ಲಿ ಅವಕಾಶ ಕಡಿಮೆ ಎಂದು ಎಂದು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ಜನರು ನೆಮ್ಮದಿಯಾಗಿ ಓಡಾಡುವುದಕ್ಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ಅಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವ ಕಡೆಗೆ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆದರೆ ಕಳೆದ ಎಂಟು ವರ್ಷಗಳಿಂದ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಲ್ಲ. ಇದಕ್ಕಾಗಿ ಪುರಸಭೆ ಅನುದಾನ ಮೀಸಲಿಟ್ಟಿದೆ. ನಾಯಿ ಹಿಡಿಯಲು ನಾಲ್ಕು ವರ್ಷದಿಂದ ಟೆಂಡರ್‌ ಕರೆಯಲಾಗಿದೆ. ಆದರೆ ಇದುವರೆಗೆ ನಾಯಿ ಹಿಡಿಯಲು ಟೆಂಡರ್‌ನಲ್ಲಿ ಯಾರು ಭಾಗವಹಿಸುತ್ತಿಲ್ಲ.

ಈ ಹಿಂದೆ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶ ಅಥವಾ ಊರಿನಿಂದ ಹೊರಗೆ ಬಿಡಲಾಗುತ್ತಿತು. ಈಚೆಗೆ ಬೀದಿನಾಯಿಗಳನ್ನು ಹಿಡಿದು ಅವುಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ, ಒಳ್ಳೆ ಊಟ ನೀಡಿ ಮೂರು ದಿನ ಆರೈಕೆ ಮಾಡಿದ ಬಳಿಕ ಬೀಡಬೇಕೆಂದು ನಿಯಮ ರೂಪಿಸಲಾಗಿದೆ.  ಹೀಗಾಗಿ ಟೆಂಡರ್‌ನಲ್ಲಿ ಬರುವ ಹಣದಿಂದ ಇಷ್ಟೇಲ್ಲ ಮಾಡುವುದು ಕಷ್ಟ ಎಂದು ನಾಯಿ ಹಿಡಿಯುವವರು ಹಿಂದೇಟು ಹಾಕುತ್ತಿದ್ದಾರೆ.

ನೆರೆಯ ಜಿಲ್ಲೆಯ ಗೌರಿಬಿದನೂರಿನಲ್ಲಿ ಹುಚ್ಚುನಾಯಿ ಕಡಿದು 14 ಮಂದಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿಯನ್ನು ತಿಳಿದಾಗಿನಿಂದ ನಾಯಿಗಳ ಹಿಂಡು ನೋಡಿ ಜನ ಹೊರಗೆ ಬರುವುದಕ್ಕೂ ಭಯ ಪಡುತ್ತಿದ್ದಾರೆ.

ಏಕಾಏಕಿ ದಾಳಿ: ರಸ್ತೆಗಳ ಇಕ್ಕೆಲುಗಳಲ್ಲಿ ಹಿಂಡಾಗಿ ಮಲಗಿರುತ್ತವೆ. ಜನರು ರಸ್ತೆಗೆ ಬರಬೇಕಾದರೆ ಭಯ ಪಡುವಂತಾಗಿದೆ. ಬೆಳಗಿನ ಸಮಯ ವಾಯುವಿಹಾರಕ್ಕೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಜನರು ಅವರ ಪಾಡಿಗೆ ಅವರು ಹೋಗುತ್ತಿದ್ದರೂ ಏಕಾಏಕಿ ದಾಳಿ ನಡೆಸಲು ಆರಂಭಿಸುತ್ತೇವೆ. ಒಂದು ನಾಯಿ ಬೊಗಳಿಕೊಂಡು ಬಂದರೆ ಸಾಕು, ಉಳಿದೆಲ್ಲಾ ನಾಯಿಗಳು ಏಕಕಾಲದಲ್ಲಿ ಎರಗಲು ಆರಂಭಿಸುತ್ತವೆ ಇದರಿಂದ ರಸ್ತೆ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಮನೆಗಳ ಬಳಿಯಲ್ಲಿ ಸಾಕಾಣಿಕೆ ಮಾಡಿರುವ ಕೋಳಿಗಳನ್ನು ಕಚ್ಚಿಕೊಂಡು ಹೋಗಿ ತಿನ್ನುತ್ತಿವೆ. ಕುರಿಗಳನ್ನು ಹೊರಗೆ ಕಟ್ಟಿ ಸ್ವಲ್ಪ ಯಾಮಾರಿದರೆ ಬಂದು ದಾಳಿ ಮಾಡುತ್ತವೆ ಎಂದು ಗೃಹಿಣಿ ಚಂದ್ರಕಲಾ ಆತಂಕ ವ್ಯಕ್ತಪಡಿಸಿದರು.

ಕುರಿ ಮೇಯಿಸಲು ಶ್ವಾನ ಕಾಟ

ಕೋಳಿ ಫಾರಂಗಳಲ್ಲಿ ಸತ್ತ ಕೋಳಿಗಳನ್ನು ತಂದು ಹೊರಗೆ ಬೀಸಾಡುತ್ತಿದ್ದಾರೆ. ಅವುಗಳನ್ನು ತಿನ್ನಲು ಬರುವ ನಾಯಿಗಳು, ಬಯಲಿನಲ್ಲೆ ಮಲಗಿರುತ್ತವೆ. ಕುರಿಗಳು ಮೇಯುವುದಕ್ಕೆಂದು ಹೋದಾಗ ಅವುಗಳನ್ನು ಅಟ್ಟಿಸಿಕೊಂಡು ಬಂದು ಕುಚ್ಚುತ್ತವೆ. ನಾವು ಬಿಡಿಸಲು ಹೋದರೂ ನಮ್ಮ ಮೇಲೆ ಎರಗುತ್ತವೆ. ನಾಯಿಗಳನ್ನು ಓಡಿಸದಿದ್ದರೆ ಕ್ಷಣಾರ್ಧದಲ್ಲಿ ಕುರಿಗಳನ್ನು ತಿಂದು ಮುಗಿಸುತ್ತವೆ

₹16 ಲಕ್ಷ ಅನುದಾನ ಮೀಸಲು

ಬೀದಿನಾಯಿ ಹಿಡಿಯಲು ಪುರಸಭೆಯಲ್ಲಿ ₹16 ಲಕ್ಷ ಅನುದಾನ ಮೀಸಲಿಟ್ಟಿದ್ದೇವೆ. ನಾಲ್ಕು ಬಾರಿ ಟೆಂಡರ್ ಕರೆದಿದ್ದೇವೆ. ಯಾರೂ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಯಾರಾದರೂ ಭಾಗವಹಿಸಿ, ನಾಯಿಗಳು ಹಿಡಿಯಲು ಬಂದರೆ ಅವರಿಗೆ ಅಗತ್ಯವಾಗಿರುವ ರಕ್ಷಣೆಯ ಜೊತೆಗೆ ಸಿಬ್ಬಂದಿ ಒದಗಿಸಲಾಗುತ್ತದೆ. ಎಬಿಸಿ ಮಾಡಲು ನಿಬಂಧನೆಗಳಿಗೆ ಅನುಸಾರವಾಗಿ ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ.
ಜಿ.ಆರ್.ಸಂತೋಷ್, ಮುಖ್ಯಾಧಿಕಾರಿ ವಿಜಯಪುರ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.