ADVERTISEMENT

ಬಿರುಕು ಬಿಟ್ಟ ಗೋಡೆ, ಸೋರುವ ಚಾವಣಿ: ಇದು ಬಿಜ್ಜವಾರ ಸರ್ಕಾರಿ ಶಾಲೆಯ ಸ್ಥಿತಿ

ಶಾಲಾ ಕಟ್ಟಡದ ಗೋಡೆಯಲ್ಲಿ ಮರದ ಬೇರು l ವಿದ್ಯುತ್‌ ಕೈಕೊಟ್ಟರೆ ಕೊಠಡಿಗಳಲ್ಲಿ ಕತ್ತಲು

ಎಂ.ಮುನಿನಾರಾಯಣ
Published 25 ಜೂನ್ 2024, 5:16 IST
Last Updated 25 ಜೂನ್ 2024, 5:16 IST
ವಿಜಯಪುರ ಹೋಬಳಿ ಬಿಜ್ಜವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡಗಳು
ವಿಜಯಪುರ ಹೋಬಳಿ ಬಿಜ್ಜವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡಗಳು   

ವಿಜಯಪುರ(ದೇವನಹಳ್ಳಿ): ಮಳೆ ಬಂದರೆ ಸೋರುವ ಚಾವಣಿ. ಒಡೆದು ಹೋಗಿರುವ ಚಾವಣಿ ಶೀಟ್‌ಗಳ ನಡುವೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು. 

ಇದು ಬಿಜ್ಜವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿ. ಹಿಂದೆ ನೂರಾರು ಮಂದಿ ವಿದ್ಯಾರ್ಥಿಗಳು ಓದುತ್ತಿದ್ದ ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 59 ಮಂದಿ ವಿದ್ಯಾರ್ಥಿಗಳಿದ್ದಾರೆ.

 ಶಾಲೆಯಲ್ಲಿನ ಶೀಟ್ ಚಾವಣಿ ಬಿರುಕುಬಿಟ್ಟಿರುವುದು

ದಿನೇ ದಿನೇ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದೆ. 3 ಮಂದಿ ಶಿಕ್ಷಕರಿದ್ದಾರೆ. ಇಲ್ಲಿರುವ 7 ಕೊಠಡಿಗಳ ಪೈಕಿ 4 ನಾಲ್ಕು ಕೊಠಡಿಗಳಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಕಲಿಯುತ್ತಿರುವ ಕೊಠಡಿಗಳ ಪೈಕಿ 2 ಕೊಠಡಿಗಳು ಸೋರುತ್ತಿವೆ. ಉಳಿದ ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲ. 1974ರಲ್ಲಿ ನಿರ್ಮಾಣವಾಗಿರುವ ಈ ಶಾಲೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಹಳೆ ಕಟ್ಟಡವನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಎಷ್ಟೇ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ದೂರುತ್ತಾರೆ.

ADVERTISEMENT
ಒಂದೇ ಕೊಠಡಿಯಲ್ಲಿ ಎರಡು ತರಗತಿ ಮಕ್ಕಳು ಪಾಠ ಕೇಳುತ್ತಿರುವುದು

ಸಿಮೆಂಟ್ ಶೀಟ್ ಚಾವಣಿ ಹೊಂದಿರುವ ಕೊಠಡಿಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ದೀಪಗಳ ಸಹಾಯದಿಂದಲೇ ಮಕ್ಕಳು ಕಲಿಯಬೇಕಾಗಿದೆ. ವಿದ್ಯುತ್ ಹೋದರೆ ಕೊಠಡಿಗಳಲ್ಲಿ ಕತ್ತಲು ಆವರಿಸಿಕೊಳ್ಳುತ್ತದೆ. ಶಾಲೆ ಆವರಣದಲ್ಲಿರುವ ಅಡುಗೆ ಕೋಣೆಯು ಶಿಥಿಲವಾಗಿದೆ.  ಪಕ್ಕದಲ್ಲಿರುವ ಇನ್ನೆರಡು ಕೊಠಡಿಗಳ ಒಳಗೆ ಮರದ ಬೇರುಗಳು ಬೆಳೆದುಕೊಂಡಿದೆ. ಮಳೆ ಬಂದರೆ ನೀರೆಲ್ಲ ಶಾಲಾ ಕೊಠಡಿಗಳ ಮುಂಭಾಗದಲ್ಲಿ ನಿಲ್ಲುತ್ತದೆ. ನೀರು ಹೊರಗೆ ಹೋಗುವುದಕ್ಕೂ ಜಾಗವಿಲ್ಲ.

ಶಾಲೆಯ ಆವರಣದಲ್ಲಿ ನಿಂತಿರುವ ಮಳೆ ನೀರು.

ಇಲ್ಲಿನ ವಿದ್ಯಾರ್ಥಿಗಳು ಆಟವಾಡುವುದಕ್ಕೆ ಸೂಕ್ತವಾದ ಆಟದ ಮೈದಾನವಿಲ್ಲ. ಶಾಲೆ ಮುಂಭಾಗದಲ್ಲಿ ಕಾಂಕ್ರೀಟ್ ಹಾಕಿರುವ ಖಾಲಿ ಜಾಗದಲ್ಲೇ ಆಟವಾಡಿಕೊಳ್ಳಬೇಕು. ಇದರಿಂದ ಕ್ರೀಡಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಕ್ರೀಡೆ ಕಲಿಯುವುದಕ್ಕೂ ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ. ಮಳೆ ಇಲ್ಲವಾದರೆ ಶಾಲೆ ಮುಂಭಾಗದ ಬಯಲಿನಲ್ಲಿ ಕುಳಿತುಕೊಂಡು ಮಕ್ಕಳು ಪಾಠ ಕೇಳುತ್ತಾರೆ. ಸರ್ಕಾರದಿಂದ ಸಿ.ಎಸ್.ಆರ್.ಅನುದಾನದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿಕೊಟ್ಟು, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಬಿದ್ದುಹೋಗಿದ್ದ ಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿರುವುದು
ಮಿಲನ  7ನೇ ತರಗತಿ ವಿದ್ಯಾರ್ಥಿನಿ

ಗುಣಮಟ್ಟ ಕಟ್ಟಡ ನಿರ್ಮಾಣಕ್ಕೆ ಮನವಿ

ಶಾಲೆಗೆ ಬರುವುದಕ್ಕೆ ಇಷ್ಟ. ಆದರೆ ಶಾಲೆಯಲ್ಲಿ ಕುಳಿತುಕೊಂಡು ನಿರ್ಭಿತಿಯಿಂದ ಪಾಠ ಕೇಳುವುದಕ್ಕೆ ಭಯವಾಗುತ್ತದೆ. ಬೆಳಕು ಇರುವುದಿಲ್ಲ. ಮಳೆ ಬಂದರೆ ಸೋರುತ್ತದೆ. ಎಲ್ಲಿ ಸೋರುವುದಿಲ್ಲವೋ ಅಲ್ಲಿ ಕುಳಿತುಕೊಳ್ಳುತ್ತೇವೆ. ನಮಗೆ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿಕೊಡಿ.

ಮಿಲನ 7ನೇ ತರಗತಿ ವಿದ್ಯಾರ್ಥಿನಿ

ಚಿಂತನ್ 7 ನೇ ತರಗತಿ ವಿದ್ಯಾರ್ಥಿ

ಒಂದೇ ಕೊಠಡಿಯಲ್ಲಿ ಪಾಠ

ನಾವು ಬೇರೆ ಶಾಲೆಗಳ ವಿದ್ಯಾರ್ಥಿಗಳಂತೆ ಕ್ರೀಡೆಗಳು ಕಲಿಯುವುದಕ್ಕೆ ಆಸೆಯಾಗುತ್ತದೆ. ಆದರೆ ಆಟವಾಡುವುದಕ್ಕೆ ಜಾಗವೇ ಇಲ್ಲ. ಒಂದೇ ಕೊಠಡಿಯಲ್ಲಿ ಎರಡು ತರಗತಿಗಳನ್ನು ಕೂರಿಸಿ ಪಾಠ ಮಾಡುತ್ತಾರೆ. ಇದರಿಂದ ಕಲಿಯುವುದಕ್ಕೆ ಗೊಂದಲವಾಗುತ್ತದೆ.

ಚಿಂತನ್ 7ನೇ ತರಗತಿ ವಿದ್ಯಾರ್ಥಿ

ಶಾಲಾ ಕೊಠಡಿಯೊಳಗೆ ಮರದ ಬೇರುಗಳು ಬಂದಿರುವುದು
ಮಕ್ಕಳ ಕೊರತೆಯಿಂದ ಅನುದಾನಕ್ಕೆ ಅಡ್ಡಿ
ಸಿ.ಎಸ್.ಆರ್.ಅನುದಾನದಡಿ ಅನುದಾನ ತೆಗೆದುಕೊಳ್ಳಲು ಶಾಲೆಯಲ್ಲಿ ದಾಖಲಾತಿ 70 ಮಕ್ಕಳ ಮೇಲಿರಬೇಕು. ನಾವು ಹಲವು ಶಾಲೆಗಳನ್ನು ಶಿಫಾರಸು ಮಾಡಿದ್ದರೂ ಮಕ್ಕಳ ಕೊರತೆಯಿಂದಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ನಿಯಮ ಬದಲಾಗಬೇಕಾಗಿದೆ. ಹೊಸ ಕಟ್ಟಡಗಳ ನಿರ್ಮಾಣ ಕಷ್ಟವಾಗುತ್ತಿದೆ. ಈ ಕುರಿತು ಉಪನಿರ್ದೇಶಕ ಬಳಿ ಚರ್ಚೆ ಮಾಡಲಾಗುತ್ತದೆ– ಸುಮಾ ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.