ಆನೇಕಲ್: ಮೂರು ವರ್ಷಗಳಿಂದ ಒಂಟಿಯಾಗಿದ್ದ ಬನ್ನೇರುಘಟ್ಟ ಉದ್ಯಾನದ ಜಿರಾಫೆ ಗೌರಿಯ ಬೇಸರ ಕಳೆಯಲು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಹೊಸ ಗೆಳತಿ ‘ಶಿವಾನಿ’ ಜೊತೆಯಾಗಿದ್ದಾಳೆ.
ಆ ಮೂಲಕ ಗೌರಿಗೆ ಹೊಸ ಗೆಳತಿಯನ್ನು ದೊರೆಕಿಸಿ ಕೊಡುವಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬನ್ನೇರುಘಟ್ಟ ಆವರಣಕ್ಕೆ ಮಂಗಳವಾರ ಬಂದಿಳಿದ ಶಿವಾನಿಯನ್ನು ಕಂಡು ಗೌರಿ ಗೆಲುವಾದಳು. ಹೊಸ ಗೆಳತಿಯನ್ನು ಬಿಟ್ಟು ಕದಲಿಲ್ಲ. ಆವರಣದ ತುಂಬಾ ಗೆಳತಿಯೊಂದಿಗೆ ಖುಷಿಯಿಂದ ಓಡಾಡಿತು. ಆಟವಾಡಿ ಸಂಭ್ರಮಿಸಿತು. ಇವುಗಳಲ್ಲಿಯ ಹೊಂದಾಣಿಕೆ ಕಂಡು ಸಿಬ್ಬಂದಿ ಕೂಡ ನಿರಾಳರಾಗಿದ್ದಾರೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಭರತ್ ಮತ್ತು ಬಬ್ಲಿ ಜಿರಾಫೆಗೆ ಜನಿಸಿದ ಶಿವಾನಿಯನ್ನು ಪ್ರಾಣಿ ವಿನಿಮಯ ಯೋಜನೆ ಅಡಿ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗಿದೆ. 2018ರಲ್ಲಿ ಗೌರಿಯನ್ನೂ ಮೈಸೂರು ಮೃಗಾಲಯದಿಂದ ತರಲಾಗಿತ್ತು.
ಎರಡು ವರ್ಷ ಏಕಾಂಗಿಯಾಗಿದ್ದ ಗೌರಿಗೆ ಮೈಸೂರಿನ ಮೃಗಾಲಯದಿಂದ ತಂದಿದ್ದ ಯದುನಂದನ ಎಂಬ ಗಂಡು ಜಿರಾಫೆ ಜೊತೆಯಾಗಿತ್ತು. ಆದರೆ ಒಂದೇ ವರ್ಷದಲ್ಲಿ ಯದುನಂದನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತ್ತು. ಅದಾದ ನಂತರ ಗೌರಿ ಒಂಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.