ADVERTISEMENT

ಬೆಂ.-ಮೈಸೂರು ರಸ್ತೆ | ಕ್ರೆಡಿಟ್‌ ಯಾರಿಗೂ ಸೇರುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಆನೇಕಲ್‌: ಪಂಚರತ್ನ ಯಾತ್ರೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 4:19 IST
Last Updated 13 ಮಾರ್ಚ್ 2023, 4:19 IST
ಆನೇಕಲ್‌ನಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಿದ್ದ ಪಂಚರತ್ನ ಯಾತ್ರೆಯ ಅಂಗವಾಗಿ ಆನೇಕಲ್‌ನ ಅಂಬೇಡ್ಕರ್‌ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಲಾರ್ಪಣೆ ನೆರವೇರಿಸಿದರು
ಆನೇಕಲ್‌ನಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಿದ್ದ ಪಂಚರತ್ನ ಯಾತ್ರೆಯ ಅಂಗವಾಗಿ ಆನೇಕಲ್‌ನ ಅಂಬೇಡ್ಕರ್‌ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಲಾರ್ಪಣೆ ನೆರವೇರಿಸಿದರು   

ಆನೇಕಲ್ : ಜೆಡಿಎಸ್‌ ಶಾಸಕಾಂಗದ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧೆಡೆ ಪಂಚರತ್ನ ರಥ ಯಾತ್ರೆ ಸಂಚರಿಸಿತು.

ತಾಲ್ಲೂಕಿನ ಚಂದಾಪುರದಲ್ಲಿ ಪ್ರಾರಂಭವಾದ ಯಾತ್ರೆಯ ಅಂಗವಾಗಿ ರೋಡ್‌ ಶೋ ಆಯೋಜಿಸಲಾಗಿತ್ತು. ಅಪಾರ ಜನಸ್ತೋಮದ ನಡುವೆ ಎಚ್‌.ಡಿ.ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ಸಂಚರಿಸಿದರು.

ಚಂದಾಪುರ, ಸೂರ್ಯಸಿಟಿ, ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರಗಳಲ್ಲಿ ಯಾತ್ರೆಯು ಸಂಚರಿಸಿತು. ತಾಲ್ಲೂಕಿನ ಚಂದಾಪುರದಲ್ಲಿ ಮೂಸಂಬಿ ಹಾರ ಮತ್ತು ರಾಗಿಯ ಹಾರವನ್ನು ಹಾಕುವ ಮೂಲಕ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.

ADVERTISEMENT

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ರಸ್ತೆಯ ಕ್ರೆಡಿಟ್‌ ಯಾರಿಗೂ ಸೇರುವುದಿಲ್ಲ. ಈ ರಸ್ತೆಯು ಅಭಿವೃದ್ಧಿಗೆ ಪೂರಕವಾಗಿದೆ.
ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಈ ರಸ್ತೆಗೆ ಅನುದಾನ ನೀಡಲಾಗಿತ್ತು. ಬೆಂಗಳೂರು-ಮೈಸೂರು ರಸ್ತೆಯು ರಾಜ್ಯದ ರೈತರ ಭೂಮಿಯಾಗಿದೆ. ಕನ್ನಡಿಗರ ತೆರಿಗೆ ಹಣದಿಂದ ಅಭಿವೃದ್ಧಿ ಮಾಡಲಾಗಿದೆ’ ಎಂದು ತಿಳಿಸಿದರು.

ಕರ್ನಾಟಕದ ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನತಾ ಜಲಧಾರೆ ಮತ್ತು ಪಂಚರತ್ನ ಯಾತ್ರೆಗೆ ರಾಜ್ಯದೆಲ್ಲೆಡೆ ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು.

ಆನೇಕಲ್‌ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು, ಆನೇಕಲ್‌-ಅತ್ತಿಬೆಲೆ ರಸ್ತೆಯ ರೈಲ್ವೇ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಾಣ, ಐದು ಕೈಗಾರಿಕ ಪ್ರದೇಶಗಳಿರುವುದರಿಂದ ಸ್ಥಳೀಯರಿಗೆ ಉದ್ಯೋಗವಾಶಕ ಕಲ್ಪಿಸಬೇಕು. ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕು ಎಂಬುದು ಜೆಡಿಎಸ್‌ನ ಉದ್ದೇಶವಾಗಿದೆ. ಹಾಗಾಗಿ ಈ ಬಾರಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಆನೇಕಲ್‌ ವಿಧಾನಸಭಾ ಕ್ಷೇತ್ರದ ಮುಖಂಡ ಕೆ.ಪಿ.ರಾಜು ಮಾತನಾಡಿ, ಆನೇಕಲ್‌ನ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು. ಹಲವು ಅಭಿವೃದ್ಧಿ ಕಾರ್ಯಗಳು ನಮ್ಮ ಗುರಿಯಾಗಿದೆ. ಕೆರೆಗಳ ಅಭಿವೃದ್ಧಿ, ರಸ್ತೆ ಮೂಲಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು’ ಎಂದರು

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ದೇವೇಗೌಡ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ವಿನಯ್ ರೆಡ್ಡಿ, ಮುಖಂಡರಾದ ತಮ್ಮನಾಯಕನಹಳ್ಳಿ ಶ್ರೀನಿವಾಸ್, ಆರ್.ದೇವರಾಜು, ರವಿ ಇದ್ದರು.

ಬಿಜೆಪಿ ಜಾಹೀರಾತಿನ ಸರ್ಕಾರ: ‘ನರೇಂದ್ರ ಮೋದಿ ಅವರ ಮಂಡ್ಯ ಭೇಟಿಯಿಂದಾಗಿ ಯಾರಿಗೂ ಲಾಭವಿಲ್ಲ. ಬಿಜೆಪಿ ಸರ್ಕಾರ ಜಾಹಿರಾತಿನ ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಜಾಹಿರಾತು ಪ್ರಕಟ ಮಾಡುತ್ತಿದೆ. ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಾಲ್ಲೂಕಿನ ಎಲ್ಲೆಡೆ ಜನಸಾಗ ಸೇರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ’ ಎಂದು ಹೆಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.