ADVERTISEMENT

ವೀಳ್ಯದೆಲೆ ಇನ್ನಷ್ಟು ದುಬಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 2:13 IST
Last Updated 20 ಫೆಬ್ರುವರಿ 2023, 2:13 IST
   

ದಾಬಸ್‌ಪೇಟೆ: ಮಾರುಕಟ್ಟೆಯಲ್ಲಿ ‘ವೀಳ್ಯದೆಲೆ’ ದರ ಗಗನಮುಖಿ ಆಗಿದೆ. ಒಂದು ಕಟ್ಟು ವೀಳ್ಯದೆಲೆ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ.

ಕಪ್ಪುಬಣ್ಣದ ಎಲೆ ಒಂದು ಕಟ್ಟಿಗೆ ಕನಿಷ್ಠ ₹ 80 ಇದ್ದರೆ, ಬಿಳಿ ಬಣ್ಣದ ಚಿಗುರು ಎಲೆಯ ಒಂದು ಕಟ್ಟು ₹ 120ಕ್ಕೆ ಮಾರಾಟವಾಗುತ್ತಿದೆ.

ಚಳಿಗಾಲದಲ್ಲಿ ವೀಳ್ಯದೆಲೆ ಬಳ್ಳಿಯಲ್ಲಿ (ಅಂಬು) ಹೊಸ ಚಿಗುರು ಬರುವುದಿಲ್ಲ. ಈ ವೇಳೆ ದರ ಕಟ್ಟಿಗೆ ₹ 60ರಿಂದ ₹ 70 ಇರುತ್ತಿತ್ತು. ಈ ವರ್ಷ ನೂರು ರೂಪಾಯಿ ಗಡಿ ದಾಟಿದೆ ಎಂದು ವ್ಯಾಪಾರಸ್ಥರು ಹೇಳಿದರು.

ADVERTISEMENT

ದರ ಕಡಿಮೆಯಿದ್ದಾಗ ಕಟ್ಟಿಗೆ ಕನಿಷ್ಠ 100ರಿಂದ 120 ಎಲೆ ಜೋಡಿಸುತ್ತಿದ್ದರು. ಎಲೆ ಗುಣಮಟ್ಟವೂ ಉತ್ತಮವಾಗಿಯೇ ಇರುತ್ತಿತ್ತು. ಆದರೆ, ದರ ಏರಿಕೆ ಆಗಿರುವುದರಿಂದ ಕಟ್ಟಿನಲ್ಲಿ ಎಲೆ ಕಡಿಮೆ ಯಾಗಿದೆ. ಜತೆಗೆ, ಕಟ್ಟಿನ ಮಧ್ಯೆ ಸಣ್ಣ ಹಾಗೂ ಹರಿದ ಎಲೆಗಳನ್ನು ಜೋಡಿಸುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸುತ್ತಾರೆ.

ದರ ಹೆಚ್ಚಲು ವಿಪರೀತ ಮಳೆಯೂ ಕಾರಣ. ವೀಳ್ಯದೆಲೆ ತೋಟಗಳಲ್ಲಿ ನೀರು ನಿಂತು ಬಳ್ಳಿಗಳು ಕೊಳೆತು ಹೋಗಿವೆ. ಈ ಸಮಯದಲ್ಲಿ ಮದುವೆ, ಗೃಹಪ್ರವೇಶ, ಜಾತ್ರೆಯಂತಹ ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ವೀಳ್ಯದೆಲೆಯ ದರ ಹೆಚ್ಚಾಗಿದೆ ಎಂದು ಮಾರಾಟಗಾರ ಮಂಜುನಾಥ್ ಅವರು ಹೇಳಿದರು.

ನವೆಂಬರ್‌ನಲ್ಲಿ ಕಟ್ಟಿಗೆ ₹ 50ರಿಂದ ₹70 ಆಸುಪಾಸಿನಲ್ಲಿದ್ದ ದರವು ಜನವರಿ ವೇಳೆಗೆ ಹೆಚ್ಚಾಗಿತ್ತು. ಈಚೆಗೆ ನಿತ್ಯವೂ ದರ ಏರಿಕೆ ಆಗುತ್ತಲೇ ಇದೆ. ಕೆಲವೊಮ್ಮೆ ನೂರು ರೂಪಾಯಿ ಕೊಟ್ಟರೂ ಎಲೆ ಸಿಗುತ್ತಿಲ್ಲ. ಎಲೆ ಮಾರಾಟ ಮಾಡುವುದು ಕಷ್ಟವಾಗುತ್ತಿದೆ. ‌ಮುಂಗಾರು ಪೂರ್ವಮಳೆ ಆರಂಭವಾಗಿ ಅಂಬುಗಳನ್ನು ಇಳಿಸಿ ಕಟ್ಟಿದ ಮೇಲೆ, ಹೊಸ ಚಿಗುರು ಬಂದ ನಂತರವಷ್ಟೆ ದರ ಇಳಿಕೆ
ಆಗಲಿದೆ ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.