ದೇವನಹಳ್ಳಿ: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ರಾಜ್ಯದ ಕೆಲ ಸಚಿವರು ತೆಲಂಗಾಣದ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರ, ಶ್ಯಾನಪ್ಪನಹಳ್ಳಿ ಹೊಸಹಳ್ಳಿ ಭಾಗದಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರದಿಂದ ಕಂಗೆಟ್ಟಿರುವ ಜನತೆಗೆ ಆಹಾರ ವ್ಯವಸ್ಥೆ, ಜಾನುವಾರುಗಳಿಗೆ ಗೋ ಶಾಲೆ, ಮೇವು ಬ್ಯಾಂಕ್ ತೆರೆಯುವ ಮನಸ್ಥಿತಿ ಸರ್ಕಾರಕ್ಕಿಲ್ಲ. ಇಂತಹ ಧಾರುಣ ಸ್ಥಿತಿಯಲ್ಲಿ ಸಚಿವರು ನಿಷ್ಕ್ರೀಯವಾಗಿದ್ದು, ಅನೇಕ ಜಿಲ್ಲೆಯ ಉಸ್ತುವಾರಿ ಸಚಿವರು ತೆಲಂಗಾಣ ರಾಜ್ಯದ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರಿಗೆ ಇಲ್ಲಿನ ರೈತರು ಬೇಕಾಗಿಲ್ಲ ಎಂದು ಹರಿಹಾಯ್ದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಯಾರೊಬ್ಬರು ರೈತರ ಮನೆ ಬಾಗಿಲಿಗೆ ಹೋಗಿಲ್ಲ. ಇವರು ಬರವನ್ನು ನಿರ್ವಹಣೆ ಮಾಡುವ ರೀತಿ ಇದಾಗಿದೆ. ಇಷ್ಟೋಂದು ಬೇಜವಾಬ್ದಾರಿಯಿಂದ ಸರ್ಕಾರ ನಡೆಸುವ ಬದಲು ಸರ್ಕಾರ ವಿಸರ್ಜನೆ ಮಾಡುವುದು ಉತ್ತಮ ಎಂದು ಕುಟುಕಿದರು.
ಎಲ್ಲ ಬಿಜೆಪಿ ಶಾಸಕರು ಬರ ಅಧ್ಯಯನ ನಡೆಸುತ್ತಿದ್ದು ಮೂರು ದಿನಗಳಲ್ಲಿ ₹10 ಸಾವಿರ ಕೋಟಿ ಪರಿಹಾರ ಉಚಿತ ಬೀಜ ವಿತರಣೆ ಗೋ ಶಾಲೆ ಸ್ಥಾಪನೆ ಮಾಡದೇ ಇದ್ದರೇ ನ.10ರೊಳಗೆ ರಾಜ್ಯದ ರೈತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ.ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ
ರೈತರೊಂದಿಗೆ ಕಾಂಗ್ರೆಸ್ ಚೆಲ್ಲಾಟ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ ರಾಜಕಾರಣಿ ಎನ್ನುತ್ತಾರೆ. ವಿರೋಧ ಪಕ್ಷವಾದ ಬಿಜೆಪಿ ಬರ ಅಧ್ಯಯನ ಕೈಗೊಳ್ಳುವ ಮುನ್ನವೇ ರಾಜ್ಯ ಸರ್ಕಾರ ಬರ ಪರಿಹಾರ ಘೋಷಿಸುತ್ತದೆ ಎಂದು ಭಾವಿಸಿದ್ದೇವು, ಆದರೆ, ಕಾಂಗ್ರೆಸ್ ಸರ್ಕಾರ ಬರಗಾಲದಲ್ಲಿ ಬಡಿದಾಡುತ್ತಿಡುವ ರೈತರೊಂದಿಗೆ ಚೆಲ್ಲಾಟ ಆಡುತ್ತಿದೆ’ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸಲು ವಿಫಲವಾಗಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಇದ್ದಾಗ ಪ್ರವಾಹದಿಂದ ಮನೆ ಹಾನಿಯ ಪರಿಹಾರವಾಗಿ ₹5 ಲಕ್ಷ ದುರಸ್ತಿದಾಗಿ ಹಣ ಬಿಡುಗಡೆ ಮಾಡಿದ್ದರು. ಆಗ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸಿರಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎವಿಎನ್ ನಾರಾಯಣಸ್ವಾಮಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರವಿ ಕುಮಾರ್, ಬೆಂ.ಉತ್ತರ ತಾಲ್ಲೂಕು ಅಧ್ಯಕ್ಷ ಕಡತನಮಲೆ ಸತೀಶ್, ಕಾಳಿ ಮುನಿರಾಜು, ಲೋಕೇಶ್ ಗೌಡ, ನಾರಾಯಣ ಗೌಡ, ಸುನೀಲ್, ಅಂಬರೀಶ್ ಗೌಡ, ಕಾಳಿ ಮುನಿರಾಜು ಇದ್ದರು.
₹33 ಸಾವಿರ ಕೋಟಿ ಬೆಳೆ ನಷ್ಟ
ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಬರದಿಂದಾಗಿ ಒಣಗಿ ಬರಗೆಟ್ಟು ಹೋಗಿದೆ. ಇದರಿಂದಾಗಿ ₹33 ಸಾವಿರ ಕೋಟಿ ನಷ್ಟವಾಗಿದ್ದು ಬಿಜೆಪಿ ಬರ ಅಧ್ಯಯನಕ್ಕೆ ಹೋದ ನಂತರ ಜನರ ಕಣ್ಣಿಗೆ ಮಂಕು ಬಳಿಯಲು ರಾಜ್ಯ ಸರ್ಕಾರ ಕೇವಲ ₹324 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿದರು. ಸಾವಿರಾರು ಎಕರೆ ಜೋಳ ಬೆಳೆದಿದ್ದ ರೈನ ಕೈಯಲ್ಲಿ ಒಂದು ತೆನೆ ಫಸಲಿಲ್ಲ ರಾಗಿ ಬೆಳೆದವರು ಸಂಪೂರ್ಣವಾಗಿ ನಷ್ಟ ಅನುಭವಿಸಿದ್ದಾರೆ. ಕಡಲೆ ಹಾಕಿದವರು ಭೂಮಿಯಲ್ಲಿ ಇಂಗಿ ಹೋಗಿದ್ದಾರೆ. ಇಂತಹ ಧಾರುಣ ಪರಿಸ್ಥಿತಿಯಲ್ಲಿರುವ ಜನತೆ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದರು. *** ಪಕ್ಷಾತೀತವಾಗಿ ಬರ ಎದುರಿಸಬೇಕಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷಾತೀತವಾಗಿ ಬರದ ಪರಿಸ್ಥಿತಿ ಎದುರಿಸಲು ಕೇಂದ್ರದಲ್ಲಿ ಪ್ರಧಾನಿ ಭೇಟಿಗೆ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗುತ್ತಾರೆ ಎಂದರೇ ಕರ್ನಾಟಕದಲ್ಲಿಯೇ ಕುಳಿತ ಕೇಂದ್ರ ಬರ ಪರಿಹಾರ ನೀಡುತ್ತಿಲ್ಲ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.