ಆನೇಕಲ್: ‘ಲಸಿಕೆ ಉತ್ಸವದ ಅಂಗವಾಗಿ ಕೆಲಸ ಮಾಡುವ ಸ್ಥಳದಲ್ಲಿಯೇ ಅರ್ಹರಿಗೆ ಲಸಿಕೆ ಹಾಕುವ ವ್ಯವಸ್ಥೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಬಯೋಕಾನ್ ಸಮೂಹ ಸಂಸ್ಥೆಗಳ ನೌಕರರಿಗೆ ಅನುಕೂಲವಾಗಲು ಬಯೋಕಾನ್‌ನ ಸಿಂಜಿನ್‌ನಲ್ಲಿ ಲಸಿಕೆ ಕೇಂದ್ರವನ್ನು ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿರುವುದು ಉಪಯುಕ್ತವಾಗಿದೆ’ ಎಂದು ಬಯೋಕಾನ್ ಸಂಸ್ಥೆಯ ಮುಖ್ಯಸ್ಥ ಕಿರಣ್ ಮಜುಂದಾರ್ ಷಾ ತಿಳಿಸಿದರು.
ಎಲೆಕ್ಟ್ರಾನಿಕ್ ಸಿಟಿಯ ಬಯೋಕಾನ್ ಸಿಂಜಿನ್ ಸಂಸ್ಥೆಯ ಆವರಣದಲ್ಲಿ ಪ್ರಾರಂಭಿಸಿರುವ ಕೊರೊನಾ ಲಸಿಕೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕೊರೊನಾ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೇ ಇವೆ. ಎರಡನೇ ಅಲೆಯನ್ನು ಸಮರ್ಥವಾಗಿ ತಡೆಯಲು ಲಸಿಕೆ ಹಾಕುವುದನ್ನು ಹೆಚ್ಚಿಸಬೇಕು. ತಪಾಸಣೆ ಮತ್ತು ಚಿಕಿತ್ಸೆ ಹೆಚ್ಚಿಸಬೇಕು. ಲಸಿಕೆಯಿಂದತಾತ್ಕಾಲಿಕವಾಗಿ ದಣಿವು, ಶೀತ, ಸ್ನಾಯುನೋವು ಬರಬಹುದು ಆದರೆ ಇದು ಒಂದೆರಡು ದಿನಗಳಲ್ಲಿ ವಾಸಿಯಾಗುತ್ತದೆ. ಲಸಿಕೆಯಿಂದ ಯಾವುದೇ ತೊಂದರೆಯಿಲ್ಲ. ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆಯ ಬಗೆಗಿನ ಅಪಪ್ರಚಾರವನ್ನು ತಡೆಯಬೇಕಾಗಿದೆ. ಬಯೋಕಾನ್ ಸಿಂಜಿನ್‌ನಲ್ಲಿ ಸುಸಜ್ಜಿತ ಲಸಿಕೆ ಕೇಂದ್ರವನ್ನು ತೆರೆಯಲಾಗಿದೆ. ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲಾ ಅರ್ಹ ನೌಕರರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಂಪನಿಯ ನೌಕರರಿಗೆ ಲಸಿಕೆ ಕಾರ್ಯ ಪೂರ್ಣಗೊಂಡ ನಂತರ ಇತರೆವರೆಗೂ ಲಸಿಕೆ ಹಾಕಲು ಅವಕಾಶ ಕಲ್ಪಿಸಲಾಗುವುದು’ ಎಂದರು.
ಲಸಿಕೆ ಹಾಕಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಹೆಚ್ಚಿಸುವ ಸಲುವಾಗಿ ಹೆಚ್ಚಿನ ಲಸಿಕೆ ಕೇಂದ್ರಗಳನ್ನು ತೆರೆಯುವ ಅವಶ್ಯಕತೆಯಿದೆ. ಕೊರೊನಾ ಮಹಾಮಾರಿಯನ್ನು ಎದುರಿಸಲು ಸಾರ್ವಜನಿಕರು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಬಯೋಕಾನ್ ಸಂಸ್ಥೆಯು ಲಸಿಕೆ ಕೇಂದ್ರಗಳನ್ನು ತೆರೆಯಲು ಮುಂದಾಗಿರುವುದು ಶ್ಲಾಘನೀಯ. ಇದೇ ಮಾದರಿಯನ್ನು ಎಲ್ಲಾ ಕಂಪನಿಗಳು ಅನುಸರಿಸಿದರೆ ಲಸಿಕೆ ಕಾರ್ಯಕ್ಕೆ ವೇಗ ದೊರೆಯುತ್ತದೆ’ ಎಂದರು.
ನಾರಾಯಣ ಹೃದಯಾಲಯದಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ಪೀಡಿತರಿಗೆ ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ. ಈ ದಿಸೆಯಲ್ಲಿ ನಾರಾಯಣ ಹೃದಯಾಲಯ ಸಕಾರತ್ಮಕವಾಗಿ ಸ್ಪಂದಿಸಿದೆ ಎಂದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್ ರೆಡ್ಡಿ, ಉಪವಿಭಾಗಾಧಿಕಾರಿ ಡಾ.ಎಂ.ಜಿ.ಶಿವಣ್ಣ, ತಹಶೀಲ್ದಾರ್ ಪಿ.ದಿನೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ವೈದ್ಯಾಧಿಕಾರಿ ಡಾ.ವಿನಯ್, ಸಿಂಜಿನ್‌ನ ಅಧಿಕಾರಿಗಳಾದ ಡಾ.ಮಹೇಶ್ ಬಾಲ್ಗಾಟ್, ಡಾ.ಅನಿಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.