ADVERTISEMENT

ಆನೇಕಲ್: ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 14:18 IST
Last Updated 4 ನವೆಂಬರ್ 2024, 14:18 IST
ಆನೇಕಲ್‌ನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ವಕ್ಫ್ ಬೋರ್ಡ್ ಭೂ ಕಬಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು
ಆನೇಕಲ್‌ನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ವಕ್ಫ್ ಬೋರ್ಡ್ ಭೂ ಕಬಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು   

ಆನೇಕಲ್: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ವಕ್ಫ್‌ ಬೋರ್ಡ್‌ ಭೂ ಕಬಳಿಕೆ ವಿರುದ್ಧ ಸೋಮವಾರ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿತ್ತು. ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದ ವಿಜಯಪುರ, ಕೊಪ್ಪಳ, ಬೀದರ್‌, ಕಲ್ಬುರ್ಗಿಯಲ್ಲಿ ರೈತರ ಆರ್‌ಟಿಸಿ ಕಾಲಂ 11ರಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಹಿಂದೂಗಳ ಜಮೀನು ಕಬ್ಜ ಮಾಡಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ರೈತರು ಆತಂಕಕ್ಕೆ ಒಳಪಟ್ಟಿದ್ದಾರೆ. ಹಲವು ಮಠಗಳ ಆರ್‌ಟಿಸಿಯಲ್ಲೂ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನಮೂದಿಸಲಾಗಿದೆ. ಇದು ರೈತರಿಗೆ ಆತಂಕ ತರಿಸಿದೆ. ಪಟ್ಟಾಭದ್ರ ಹಿತಾಸಕ್ತಿಗಳಿಗೆ ಬೆಲೆ ನೀಡದೆ ಇಲ್ಲಿನ ಜನರ ಭಾವನೆಗಳಿಗೆ ಬೆಲೆ ನೀಡಬೇಕಾಗಿದೆ ಎಂದರು.

ನೂರಾರು ವರ್ಷಗಳ ಹಿಂದಿನಿಂದ ಇದ್ದ ದೇವಾಲಯಗಳಿಗೆ ವಕ್ಫ್‌ ಆಸ್ತಿ ಎಂದು ನಮೂದಿಸಿರುವುದು ದುರಂತ ಸಂಗತಿ. ಈ ರಾಜ್ಯದ ಮುಖ್ಯಮಂತ್ರಿ ಸ್ವತಃ ವಕೀಲರಾಗಿದ್ದಾರೆ. ಮತ್ತೊಮ್ಮೆ ಈ ನಿರ್ಧಾರದ ಬಗ್ಗೆ ಗಮನ ವಹಿಸಬೇಕು. ಈ ರಾಜ್ಯದಲ್ಲಿನ ಹಿಂದೂಗಳು ಮೂರ್ಖರಲ್ಲ. ಪ್ರಜ್ಞಾವಂತರು ಈ ಬಗ್ಗೆ ಧ್ವನಿ ಎತ್ತಲಿದ್ದೇವೆ ಎಂದರು.

ADVERTISEMENT

ಆರ್‌ಟಿಸಿಯಲ್ಲಿ ಹೆಸರು ಬದಲಾವಣೆಗೆ ಕಂದಾಯ ಇಲಾಖೆ ಅಧಿಕಾರಿಗಳು ತಿಂಗಳುಗಳ ಕಾಲ ಅಲೆದಾಡಿಸುತ್ತಾರೆ. ಆದರೆ, ಈಗ ಏಕಾಏಕಿ ಹೆಸರು ಬದಲಾವಣೆ ಮಾಡಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ರೈತರು ಮತ್ತು ಹಿಂದೂಗಳು ದಂಗೆ ಏಳುವ ಕಾಲ ಸಮೀಪದಲ್ಲಿದೆ. ಸರ್ಕಾರಿ ಭೂಮಿ ಏಕಾಏಕಿ ವಕ್ಫ್‌ ಬೋರ್ಡ್‌ ಎಂದು ನೋಟಿಫಿಕೇಷನ್‌ ಮಾಡಿರುವುದು ಖಂಡನೀಯ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಗೋಪಿನಾಥರೆಡ್ಡಿ ಮಾತನಾಡಿ, ಪ್ರಪಂಚದಲ್ಲಿ 30-40 ಮುಸ್ಲಿಂ ದೇಶಗಳಿದ್ದರೂ ವಕ್ಫ್‌ ನಿಯಮಗಳಿಲ್ಲ. ಅಮಾಯಕ ರೈತರಿಗೆ ನೋಟಿಸ್‌ ನೀಡುವ ಮೂಲಕ ರೈತರಿಗೆ ಮತ್ತು ಸಾಮಾನ್ಯ ಮಂದಿ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್‌ ಸರ್ಕಾರ ಸಂಚು ರೂಪಿಸಿದೆ. ಸಾಮಾನ್ಯ ರೈತರ, ಬಡವರ ಆಸ್ತಿಯನ್ನು ಕಬಳಿಸುವ ಲ್ಯಾಂಡ್‌ ಜಿಹಾದ್‌ ಇದಾಗಿದೆ ಎಂದು ದೂರಿದರು.

ಸಾಮಾನ್ಯ ರೈತರ ಆರ್‌ಟಿಸಿ ಕಾಲಂ 11ರಲ್ಲಿನ ನೋಟಿಸ್‌ನಿಂದಾಗಿ ರೈತರು ದುಡಿದ ಹಣವನ್ನು ವಕ್ಫ್‌ ಪ್ರಾಧಿಕಾರದ ಮುಂದೆ ಅಲೆದಾಡುವಂತಾಗಿದೆ. ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಯಲ್ಲಿ ಪರಿವರ್ತನೆ ತರಲು ಚಿಂತನೆ ನಡೆಸಿದೆ. ವಕ್ಫ್‌ ಹೆಸರಿನಲ್ಲಿ ಕಬಳಿಕೆ ತಡೆಯಲು ಕೇಂದ್ರ ಸರ್ಕಾರ ಚಿಂತಿಸಿದೆ. ವಕ್ಫ್‌ ಆಸ್ತಿ ಕಬಳಿಸಿರುವ ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ನೀಡಿಲ್ಲ. ಬದಲಿಗೆ ರೈತರಿಗೆ, ಸಾಮಾನ್ಯ ವರ್ಗಗಳಿಗೆ ದೇವಾಲಯ ಮಠಗಳಿಗೆ ನೋಟಿಸ್‌ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು. ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ರಾಮಮೂರ್ತಿ, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಯಂಗಾರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಮುನಿರಾಜುಗೌಡ, ಬಿ.ಬಿ.ಐ.ಮುನಿರೆಡ್ಡಿ, ಸುರೇಶ್‌, ರಾಜಶೇಖರರೆಡ್ಡಿ, ಮುಖಂಡರಾದ ಹುಲ್ಲಹಳ್ಳಿ ಶ್ರೀನಿವಾಸ್‌, ದೊಡ್ಡಹಾಗಡೆ ಶಂಕರ್‌, ಅಶೋಕ್‌, ಜಯಪ್ರಕಾಶ್‌, ದಿನ್ನೂರು ರಾಜು, ಬಿ.ನಾಗರಾಜು, ಬಳ್ಳೂರು ವಸಂತ್‌ರೆಡ್ಡಿ, ತಿಮ್ಮರಾಜು, ಬಿ.ಜಿ.ಆಂಜಿನಪ್ಪ, ಸೋಮಶೇಖರರೆಡ್ಡಿ, ರಾಧಾಕೃಷ್ಣ, ನಾಗೇಂದ್ರ, ನಾಗೇಶ್‌ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.