ದೇವನಹಳ್ಳಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಬಂದಿದ್ದ ಭಾರಿ ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವನಹಳ್ಳಿಗೆ ಬರುವ ಮುನ್ನವೇ ಬಸ್‌ಗಳಲ್ಲಿ ಪಟ್ಟಣದ ಹೊರವಲಯಗಳಲ್ಲಿ ಬಂದಿಳಿದ ಜನರು ಕಾಲ್ನಡಿಗೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದರು.
ದೂರದ ಊರಿನಿಂದ ಬಂದ ಜನರಿಗೆ ಗುರುಭವನ ಸೇರಿದಂತೆ ವಿವಿಧೆಡೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿಯವರು ಕರೆತಂದ ಜನತೆಗೆ ಉಪಿಟ್ಟು, ಕೆಸರಿಬಾತ್, ವಡೆ ಜೊತೆ ನೀರಿನ ಪ್ಯಾಕೇಟ್ ವಿತರಿಸಲಾಯಿತು.
ಆಹಾರ ವಿತರಣೆ ಸ್ಥಳದಲ್ಲಿ ಜನರು ಮುಗಿಬಿದ್ದ ಕಾರಣ ಉಮಟಾದ ನೂಕುನುಗ್ಗಲು ನಿಯಂತ್ರಿಸಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಾಠಿ ಬೀಸಿದರು. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಹಾಗೂ ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯ ಎಸಿಪಿ ಬಾಲಕೃಷ್ಣ ಜನರನ್ನು ಸಮಾಧಾನಗೊಳಿಸಿದರು.
ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಕುಂದಾಣ, ವಿಜಯಪುರ, ಹೋಸಕೋಟೆಯಿಂದ ಬರುತ್ತಿರುವ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ಬಸವಳಿದಿದ್ದಾರೆ.
ಪಟ್ಟಣದ ಎಲ್ಲ ರಸ್ತೆಗಳಲ್ಲಿಯೂ ಕಿಕ್ಕಿರಿದು ಜನರು ತುಂಬಿದ್ದರಿಂದ ವಾಹನ ಸಂಚಾರ ಕಷ್ಟವಾಯಿತು. ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮುಖ್ಯದ್ವಾರದಲ್ಲಿ ತಪಾಸಣೆಯ ಬಳಿಕ ಜನರನ್ನು ಒಳಗೆ ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.