ದೇವನಹಳ್ಳಿ: ಪಟ್ಟಣದ ಸಂತೆ ಬೀದಿಗೆ ಹೊಂದಿಕೊಂಡಿರುವ ಬಿಎಂಟಿಸಿ ಬಸ್ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕಂ.ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಆವತಿ ಗ್ರಾಮದ ನಾಗೇಶ್(45). ಅವರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರು ಇದ್ದಾರೆ.
ಸೋಮವಾರ ಮಧ್ಯರಾತ್ರಿ ಡಿಪೊಗೆ ಆಗಮಿಸಿದ್ದ ನಾಗೇಶ್, ಡಿಪೊ ಮ್ಯಾನೇಜರ್ ಕೊಠಡಿ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಿನ ಪಾಳಿಗೆ ಕೆಲಸಕ್ಕೆ ಬಂದ ಸಿಬ್ಬಂದಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾಕಷ್ಟು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಾಗೇಶ್, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ದೇವನಹಳ್ಳಿ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, '15 ದಿನಗಳಿಂದ ಕರ್ತವ್ಯಕ್ಕೆ ನಿಯೋಜನೆ ಮಾಡದೆ ಬಿಎಂಟಿಸಿ ಡಿಪೊ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಈ ಕುರಿತು ಮೇಲಧಿಕಾರಿಗೂ ಯಾವುದೇ ರೀತಿ ಮಾಹಿತಿಯನ್ನು ಡಿಪೊ ಮ್ಯಾನೇಜರ್ ತಿಳಿಸಿಲ್ಲ. ಅಧಿಕಾರಿಗಳ ವರ್ತನೆಯಿಂದ ಒಬ್ಬ ನೌಕರನನ್ನು ಕಳೆದುಕೊಂಡಿದ್ದೇವೆ' ಎಂದು ಆರೋಪಿಸಿದ್ದಾರೆ.
ದೇವನಹಳ್ಳಿ ಬಿಎಂಟಿಸಿ ಬಸ್ ಡಿಪೊ ಮ್ಯಾನೇಜರ್ ನರಸಿಂಹರೆಡ್ಡಿ ಮಾತನಾಡಿ, 'ಯಾವ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಮಾಹಿತಿ ಇಲ್ಲ. 450ಕ್ಕೂ ಹೆಚ್ಚಿನ ಸಿಬ್ಬಂದಿ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಿರುಕುಳ ಆರೋಪ ಸುಳ್ಳು. ಸಂಸ್ಥೆ ವತಿಯಿಂದ ಸಿಗುವ ಎಲ್ಲ ಪ್ರಯೋಜನ ಕುಟುಂಬಕ್ಕೆ ನೀಡಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.