ದೇವನಹಳ್ಳಿ: ಸುಮಾರು 5 ಸಾವಿರ ವರ್ಷದ ಹಿಂದಿನ ಶಿಲಾಯುಗದ ಆಕರ್ಷಕ ನಿಲುವುಗಲ್ಲು ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇದೊಂದು ಶಿಲಾಯುಗದ ಸಂಸ್ಕೃತಿ ಎಂದು ಇತಿಹಾಸ ತಜ್ಞರು ಬಣ್ಣಿಸಿದ್ದಾರೆ.
ಶಿಲಾಯುಗದಲ್ಲಿ ಮೃತರಾದ ವ್ಯಕ್ತಿಗಳ ಸಮಾಧಿಯ ಗುರುತಿಗಾಗಿ ಇದನ್ನು ಇಡುತ್ತಿದ್ದರು. ಶವವನ್ನು ಹೂತಿರುವ ನಿಗದಿತ ಅವಧಿಯ ನಂತರ ಅಲ್ಲಿನ ಅವಶೇಷಗಳನ್ನು ತೆಗೆದು ಮತ್ತೊಂದು ಗುಂಡಿಯಲ್ಲಿ ಹಾಕುವ ಕೆಲಸ ಮಾಡಲಾಗುತ್ತಿತ್ತು. ಅಲ್ಲಿ ಆಹಾರ, ಧಾನ್ಯ, ಪಾನೀಯಗಳನ್ನು ತುಂಬಿದ ಮಣ್ಣಿನ ಪಾತ್ರೆ, ಕಬ್ಬಿಣದ ವಸ್ತುಗಳನ್ನು ಇಡಲಾಗುತಿತ್ತು.
ಇಟ್ಟ ವಸ್ತುಗಳನ್ನು ಒಂದು ಕಡೆಯಲ್ಲಿ ಶೇಖರಣೆ ಮಾಡಿ ಗುಣಿಯ ಮೇಲೆ ನೆಡುತ್ತಿದ್ದ ಕಲ್ಲುಗಳೇ ಈ ನಿಲುವುಗಲ್ಲುಗಳು. ಇಂತಹ ನಿಲುವುಗಲ್ಲುಗಳು ಕರ್ನಾಟಕ ರಾಜ್ಯದಲ್ಲಿ ಕ್ರಿ.ಪೂ 700-800 ರಷ್ಟು ಹಳೆಯದು ಎಂದು ಗುರುತಿಸಲಾಗಿದೆ. ಪಶ್ಚಿಮ ಯೂರೋಪಿನ ಕೆಲವು ಪ್ರದೇಶಗಳಲ್ಲೂ ಇಂತಹ ನಿಲುವು ಗಲ್ಲುಗಳು ಕಂಡುಬಂದಿದ್ದು, ಅವುಗಳನ್ನು ಇಂಗ್ಲಿಷಿನಲ್ಲಿ ‘ಮೆನ್ ಹಿರ್ಸ್’ ಎಂದು ಕರೆಯುವರು ಎಂದು ಪ್ರಾಚ್ಯ ವಸ್ತು ಸಂಶೋಧಕ ಬಿಟ್ಟಸಂದ್ರ ಗುರುಸಿದ್ಧಯ್ಯ ತಿಳಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ಪತ್ತೆಯಾಗಿರುವ ನಿಲುವುಗಲ್ಲು 20 ಅಡಿಯಷ್ಟು ಉದ್ದವಿದ್ದು, ಸುಸ್ಥಿತಿಯಲ್ಲಿದೆ. ಇದರ ಸುತ್ತ ಮುತ್ತ ಇರುವ ನಿಲುವುಗಳುಗಳನ್ನು ಹುಡುಕಾಟ ಮಾಡಬೇಕಿದೆ. ಲಭ್ಯವಿರುವ ಇಂತಹ ಪ್ರಾಚೀನ ಕಾಲದ ಶಿಲಾ ಕುರುಹುಗಳನ್ನು ರಕ್ಷಿಸಬೇಕು ಎಂದು ಇತಿಹಾಸ ಸಂಶೋಧಕ ಡಾ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ಹಲವು ವರ್ಷಗಳ ಹಿಂದೆ ದೊಂಬರಾಟವಾಡುವ ಸಮುದಾಯದವರು ಬಂದಾಗ ಅವರಲ್ಲಿದ್ದ ಒಬ್ಬ ಸುರದ್ರೂಪಿ ಯುವತಿಯೂ ಬೂದಿಹಾಳದ ಮಾಂತ್ರಿಕನ ಕಾರಣದಿಂದಾಗಿ ಸಾವನ್ನಪ್ಪುತ್ತಾಳೆ. ಯುವತಿಯ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳವೂ ಇದಾಗಿರಬಹುದು ಎಂಬುದು ಜನಪದರ ಮಾತಾಗಿದ್ದು, ಪ್ರತಿ ವರ್ಷವೂ ಆ ಕಲ್ಲು ಬೆಳೆಯುತ್ತಿದೆ ಎಂಬ ನಂಬಿಕೆ ಹೊಂದಿದ್ದಾರೆ.
ಭಕ್ತಾಧಿಗಳಿಂದ ನಿಲುವುಗಲ್ಲಿಗೆ ಪೂಜೆ ಹೆಣ್ಣು ಮಕ್ಕಳಿಗೆ ಹೊಟ್ಟೆ ನೋವು ಮದುವೆಯಾಗದಿರುವುದು ಮಕ್ಕಳಾಗದವರು ಸೇರಿದಂತೆ ಇಲ್ಲಿ ನಡೆಯುವ ಊರ ಜಾತ್ರೆಯ ಸಂದರ್ಭದಲ್ಲಿ ಈ ನಿಲುವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜಾತ್ರೆಯ ಸಮಯದಲ್ಲಿ ಕಂಬಕ್ಕೆ ದೀಪೋತ್ಸವ ಮಾಡಿದಾಗ ಮಳೆ ಬಂದು ಕಂಬಕ್ಕೆ ಸಿಡಿಲು ಬಡಿದಿತ್ತು ಎಂಬ ಉಲ್ಲೇಖವೂ ಇದೆ. ಪ್ರತಿ ಸೋಮವಾರ ಮಂಗಳವಾರ ಶುಕ್ರವಾರ ರೈತಾಪಿಗಳು ಪೂಜೆ ಸಲ್ಲಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.