ವಿಜಯಪುರ (ದೇವನಹಳ್ಳಿ): ಅಂತರ್ಜಲ ಮಟ್ಟ ಕುಸಿತ, ನೀರಿನ ಅಭಾವದ ನಡುವೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೆಳೆಗಾರರು ಬೆಳೆದಿರುವ ದಾಳಿಂಬೆಗೆ ಉತ್ತಮ ಬೆಲೆ ಕುದುರಿದೆ.
15 ದಿನದ ಹಿಂದೆ ₹120 ರಿಂದ ₹150 ಇದ್ದ ಒಂದು ಕೆ.ಜಿ ದಾಳಿಂಬೆ ಬೆಲೆ ಈಗ ₹220ಕ್ಕೆ ಏರಿಕೆಯಾಗಿದೆ. ನಾಲ್ಕೈದು ವರ್ಷಗಳಲ್ಲಿ ದಾಳಿಂಬೆಗೆ ದೊರೆತ ಉತ್ತಮ ಬೆಲೆ ಇದಾಗಿದೆ.
ಕೋಲ್ಕತ್ತದ ಸಗಟು ವ್ಯಾಪಾರಿಗಳು ನೇರವಾಗಿ ರೈತರ ತೋಟಗಳಿಗೆ ಬಂದು ಮುಂಗಡ ಹಣ ಕೊಟ್ಟು ಇಡೀ ತೋಟದ ದಾಳಿಂಬೆ ಖರೀದಿಸುತ್ತಿದ್ದಾರೆ. ಕೋಲ್ಕತ್ತ ಸಗಟು ವರ್ತಕರು ₹200ಕ್ಕೆ ಕೆ.ಜಿಯಂತೆ ದಾಳಿಂಬೆ ಖರೀದಿಸುತ್ತಿದ್ದಾರೆ. ನಾಲ್ಕೈದು ವರ್ಷಗಳಲ್ಲಿ ಅನುಭವಿಸಿದ್ದ ನಷ್ಟ ಸರಿದೂಗಿಸಿಕೊಳ್ಳಲು ಈ ಬಾರಿ ಕಾಲ ಕೂಡಿ ಬಂದಿದೆ ಎನ್ನುತ್ತಾರೆ ದಾಳಿಂಬೆ ಬೆಳೆಗಾರರು.
ನೀರಿಗಾಗಿ ಕೊಳವೆಬಾವಿ ಅವಲಂಬಿಸಿರುವ ರೈತರು ತರಕಾರಿ, ಹೂವು, ದ್ರಾಕ್ಷಿ ಮುಂತಾದ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದರು. ಇತ್ತೀಚೆಗೆ ದಾಳಿಂಬೆ ಮತ್ತು ಸೇಬು ಬೆಳೆಯಲು ಶುರು ಮಾಡಿದ್ದಾರೆ. ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 488 ಹೆಕ್ಟೇರ್ ಪ್ರದೇಶದಲ್ಲಿ ರೈತರು ದಾಳಿಂಬೆ ಬೆಳೆದಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ದಾಳಿಂಬೆ ₹230 ರಿಂದ ₹250ಗೆ ಮಾರಾಟವಾಗುತ್ತಿದೆ. ಸಾಲು, ಸಾಲು ಹಬ್ಬದ ಹಿನ್ನೆಲೆಯಲ್ಲಿ ದಾಳಿಂಬೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವರ್ತಕರು.
ಕಳೆದ ನಾಲ್ಕು ವರ್ಷದಿಂದ ದಾಳಿಂಬೆ ಬೆಳೆಗಾರರು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಕಟಾವಿಗೆ ಬಂದಿರುವ ತೋಟಗಳ ಮಾಲೀಕರಿಗೆ ಕೈತುಂಬಾ ಹಣ ಸಿಗುತ್ತಿದೆ. ಸಗಟು ವರ್ತಕರು ನೇರವಾಗಿ ತೋಟಗಳಿಗೆ ಬಂದು ಮುಂಗಡ ನೀಡಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಮಧ್ಯವರ್ತಿಗಳ ಹಂಗಿಲ್ಲದೆ ನೇರವಾಗಿ ವರ್ತಕರಿಗೆ ದಾಳಿಂಬೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ದಾಳಿಂಬೆ ಬೆಳೆಗಾರರಾದ ವೆಂಕಟರಮಣಪ್ಪ, ದೇವರಾಜಪ್ಪ ಮತ್ತು ನಂಜೇಗೌಡ.
ನಮ್ಮ ಭಾಗದಲ್ಲಿ ಬೆಳೆಯುವ ದಾಳಿಂಬೆಗೆ ಕೋಲ್ಕತ್ತ, ಮಹಾರಾಷ್ಟ್ರ, ನವದೆಹಲಿ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚು ಬೇಡಿಕೆಯಿದೆ. ಪ್ರಸ್ತುತ ಕಟಾವಿಗೆ ಬಂದಿರುವ ಬೆಳೆಯ ಪ್ರಮಾಣ ಕಡಿಮೆ ಆಗಿರುವ ಕಾರಣ ಬೇಡಿಕೆ ಜಾಸ್ತಿಯಾಗಿದೆ. ಇದೇ ಬೆಲೆ ಇದ್ದರೆ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ರೈತ ಆಂಜಿನಪ್ಪ ಹೇಳುತ್ತಾರೆ.
ದೇವನಹಳ್ಳಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿನ ರೈತರಿಗೆ ದಾಳಿಂಬೆ ಬೆಳೆ ನಾಟಿಗೆ ನರೇಗಾ ಯೋಜನೆ ಅಡಿ ಸಹಾಯಧನ ಒದಗಿಸಲಾಗಿದೆ.ಆದರ್ಶ್ ತೋಟಗಾರಿಕೆ ಇಲಾಖೆಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.