ADVERTISEMENT

ಸಿ.ಸಿ. ರಸ್ತೆ ಅಭಿವೃದ್ಧಿಗೆ ಚಾಲನೆ

ಗ್ರಾ.ಪಂ. ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:49 IST
Last Updated 29 ಸೆಪ್ಟೆಂಬರ್ 2022, 5:49 IST
ವಿಜಯಪುರ ಹೋಬಳಿಯ ವೆಂಕಟೇನಹಳ್ಳಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು
ವಿಜಯಪುರ ಹೋಬಳಿಯ ವೆಂಕಟೇನಹಳ್ಳಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು   

ವಿಜಯಪುರ (ಬೆಂ. ಗ್ರಾಮಾಂತರ):ಹೋಬಳಿಯ ಶೆಟ್ಟಿಹಳ್ಳಿ, ವೆಂಕಟೇನ ಹಳ್ಳಿ, ನಾರಾಯಣಪುರ, ಪಿ. ರಂಗನಾಥ ಪುರ, ಚಿನುವಂಡನಹಳ್ಳಿ, ಭೈರಾಪುರ, ಬಿಜ್ಜವಾರ, ವೆಂಕಟಗಿರಿಕೋಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ತೀರಾ ಅನಿವಾರ್ಯವಾಗಿದ್ದ ಸ್ಥಳಗಳಲ್ಲಿ ₹ 8 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಹಿಂದೆಯೂ ವಿಶೇಷ ಅನುದಾನಗಳಲ್ಲಿ ಒಂದೊಂದು ಗ್ರಾಮಕ್ಕೆ ₹ 50 ಲಕ್ಷದಂತೆ ಅನುದಾನ ನೀಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡಲು ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಂದು ವೇಳೆ ಕಾಮಗಾರಿಯ ಗುಣಮಟ್ಟದಲ್ಲಿ ಲೋಪದೋಷ ಕಂಡುಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲಾಗುತ್ತದೆ ಎಂದರು.

ADVERTISEMENT

ಹೋಬಳಿಯ ಗಡ್ಡದನಾಯಕನಹಳ್ಳಿಯಲ್ಲಿ ಗುದ್ದಲಿಪೂಜೆ ಮಾಡಿ 8 ತಿಂಗಳು ಕಳೆದರೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಗಮನಕ್ಕೆ ತಂದಾಗ, ಇತ್ತೀಚೆಗೆ ಮಳೆ ಜಾಸ್ತಿಯಾಗಿದೆ. ಇದರಿಂದ ಕಾಮಗಾರಿ ನಡೆದಿಲ್ಲ. ಈಗ ಮಾಡಿಸಲಾಗುತ್ತದೆ ಎಂದು ತಿಳಿಸಿದರು.

ಟಿ. ಅಗ್ರಹಾರ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪುನಃ ರಸ್ತೆಯನ್ನು ಕಿತ್ತು ಹಾಕಿ ಕಾಂಕ್ರೀಟ್ ಹಾಕಲು ತಿಳಿಸಲಾಗಿದೆ. ಹುರುಳುಗುರ್ಕಿ ರಸ್ತೆಯೂ ಕಳಪೆಯಾಗಿದ್ದ ಕಾರಣ ಕಿತ್ತು ಹಾಕಿ ಹೊಸದಾಗಿ ಮಾಡಿಸಲಾಗಿದೆ. ಅವರಿಗೆ ಬಿಲ್‌ ಪಾವತಿಸದಂತೆ ತಡೆ ಹಿಡಿಯಲಾಗಿದೆ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ. ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಹೋಬಳಿ ಘಟಕದ ಅಧ್ಯಕ್ಷ ವೀರಪ್ಪ, ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಅಮರನಾಥ್, ಈರಪ್ಪ, ದೇವರಾಜ್, ಗೋವಿಂದರಾಜು, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಟಿ. ಭರತ್, ರಾಮಾಂಜಿನಪ್ಪ ಹಾಜರಿದ್ದರು.

ಶಾಸಕರ ವಿರುದ್ಧ ಆಕ್ರೋಶ: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ. ಆದರೆ, ಸೌಜನ್ಯಕ್ಕಾದರೂ ನನಗೆ ಅಥವಾ ಉಪಾಧ್ಯಕ್ಷರಿಗೂ ಆಹ್ವಾನ ನೀಡಿಲ್ಲ. ಅವರು ಅಭಿವೃದ್ಧಿಗಾಗಿ ನೀಡುತ್ತಿರುವ ಅನುದಾನ ಸಾರ್ವಜನಿಕರ ಹಣವಲ್ಲವೇ?’ ಎಂದು ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಮಂಜುನಾಥ್ ಹಾಗೂ ಉಪಾಧ್ಯಕ್ಷ ಮುರಳಿ ಮೋಹನ್ ಆಕ್ಷೇಪ ವ್ಯಕ್ತಪಡಿಸಿದರು.

ಈ ರೀತಿ ಶಾಸಕರು ತಾರತಮ್ಯ ಮಾಡಬಹುದೇ? ಉದ್ದೇಶಪೂರ್ವಕವಾಗಿ ನಮ್ಮನ್ನು ಕಡೆಗಣಿಸಿ ಜೆಡಿಎಸ್ ಮುಖಂಡರನ್ನು ಕರೆದುಕೊಂಡು ಚಾಲನೆ ನೀಡಿದ್ದಾರೆ. ಈ ಕುರಿತು ಸಚಿ ವರಿಗೆ ದೂರು ಸಲ್ಲಿಸುತ್ತೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಿಸರ್ಗ ನಾರಾಯಣಸ್ವಾಮಿ, ‘ಶಿಷ್ಟಾಚಾರದಂತೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿರುತ್ತೇವೆ. ಅವರು ಸಂಬಂಧಪಟ್ಟ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ತಿಳಿಸಬೇಕು. ಅವರು ತಿಳಿಸದಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.