ADVERTISEMENT

ದೇವನಹಳ್ಳಿ: ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 6:12 IST
Last Updated 2 ಏಪ್ರಿಲ್ 2021, 6:12 IST
ದೇವನಹಳ್ಳಿಯಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು
ದೇವನಹಳ್ಳಿಯಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು   

ದೇವನಹಳ್ಳಿ: ‘12ನೇ ಶತಮಾನದಲ್ಲಿ ಸಮಾತೆಯ ಕ್ರಾಂತಿಗೆ ಅಡಿಗಲ್ಲುಹಾಕಿದ ಬಸವಣ್ಣನವರ ದೂರದೃಷ್ಟಿ ಚಿಂತನೆ ಸಕಾರಗೊಳಿಸಿದ ಯುಗದ ಸಂತ ಶಿವಕುಮಾರಸ್ವಾಮಿ’ ಎಂದು ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ಖಜಾಂಚಿ ಕೋಡಿಮಂಚೇನಹಳ್ಳಿ ಎಸ್.ನಾಗೇಶ್ ಹೇಳಿದರು.

ಇಲ್ಲಿನ ಶತಾಯಿಷಿ ಶಿವಕುಮಾರ್ ಸ್ವಾಮಿವೃತ್ತದ ಬಳಿ ಗುರುವಾರ ತಾಲ್ಲೂಕು ವೀರಶೈವ ಲಿಂಗಾಯುತಸಮಾಜ ವತಿಯಿಂದ ನಡೆದ ಶಿವಕುಮಾರ ಸ್ವಾಮೀಜಿ 114ನೇ ಜಯಂತಿಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಪುರುಷನಾಗಿ ನಡೆದಾಡುವ ದೇವರೆನಿಸಿಕೊಂಡು ಜಾತಿ, ಧರ್ಮ, ವರ್ಗಗಳಲ್ಲಿ ತಾರತಮ್ಯ ಮಾಡದೆ ಎಲ್ಲಾ ಧರ್ಮವರು ನಮ್ಮವರೇ ಎಂಬ ಭಾವನೆಯಿಂದ ಮಠವನ್ನು ಮುನ್ನಡೆಸಿ, ಅವತಾರ ಪುರುಷರಾದರು. ತ್ರಿದಾಸೋಹದ ಮಹತ್ವವನ್ನು ವಿಶ್ವಕ್ಕೆ ಸಾರಿದ ಮಹಾಪುರುಷರೆಂದು ಹೇಳಿದರು.

ADVERTISEMENT

ಅತ್ಯಂತ ಸರಳಸ್ವಭಾವ, ಮಿತಭಾಷಿ ನಡೆನುಡಿಯಿಂದ ಹಸಿದ ಹೊಟ್ಟೆ ಮತ್ತು ನೊಂದ ಮನಸ್ಸುಗಳಿಗೆ ಮಾತೃ ಪ್ರೇಮದ ಸಿಂಚನ ನೀಡಿದ್ದರು. ಮಠದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮನಾಗರಿಕರಾಗಿ ಬೆಳೆಯಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಚಿಂತನೆಯಿಂದ ಮಠದಲ್ಲಿ ನೀಡುತ್ತಿದ್ದ ಶಿಕ್ಷಣದಲ್ಲಿ ಅತಿಹೆಚ್ಚುಶಿಸ್ತು ಪಾಲನೆ ಮಾಡಲು ಸೂಚಿಸುತ್ತಿದ್ದರು ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಮಠಾಧೀಶರು ಬರಿ ಸಂದೇಶ ನೀಡುವುದಷ್ಟೇ ಕಾಯಕವಲ್ಲ ಎಂಬುದನ್ನು ಅರಿತುಕೊಂಡ ಶ್ರೀಗಳು ಹಳ್ಳಿಗಳಿಗೆ ಸುತ್ತಿ ಮಠಕ್ಕಾಗಿ, ಮಕ್ಕಳಿಗೆ ಅನ್ನಕ್ಕಾಗಿ ಧಾನ್ಯಗಳನ್ನು ನೀಡಿ, ನಿಮ್ಮ ಮಕ್ಕಳನ್ನು ಮಠಕ್ಕೆ ಸೇರಿಸಿ ಶಿಕ್ಷಣ ಪಡೆಯಲಿ ಎಂದು ಶಿಕ್ಷಣದ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಕಾಂತರಾಜು, ಸದಸ್ಯೆ ನಳಿನಾ ಮಂಜುನಾಥ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.