ADVERTISEMENT

ಅಪೌಷ್ಟಿಕತೆ ತಡೆಗೆ ರಾಗಿ ಮಾಲ್ಟ್‌: ಕೆ.ಎನ್ ಅನುರಾಧ

ದೇವನಹಳ್ಳಿಯಲ್ಲಿ ರಾಗಿ ಮಾಲ್ಟ್‌ ವಿತರಣೆಗೆ ಜಿ.ಪಂ ಸಿಇಒ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 5:58 IST
Last Updated 23 ಫೆಬ್ರುವರಿ 2024, 5:58 IST
ದೇವನಹಳ್ಳಿಯ ಜೂನಿಯರ್ ಕಾಲೇಜು ಆವರಣದಲ್ಲಿ ಜಿ.ಪಂ ಸಿಇಒ ಅನುರಾಧ ಅವರು ಮಕ್ಕಳಿಗೆ ರಾಗಿ ಮಾಲ್ಟ್‌ ವಿತರಿಸಿದರು
ದೇವನಹಳ್ಳಿಯ ಜೂನಿಯರ್ ಕಾಲೇಜು ಆವರಣದಲ್ಲಿ ಜಿ.ಪಂ ಸಿಇಒ ಅನುರಾಧ ಅವರು ಮಕ್ಕಳಿಗೆ ರಾಗಿ ಮಾಲ್ಟ್‌ ವಿತರಿಸಿದರು   

ದೇವನಹಳ್ಳಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆಎಂಎಫ್ ಸಹಯೋಗದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್‌ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ರಾಗಿ ಹೆಲ್ತ್ ಮಿಕ್ಸ್ ವಿತರಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್ ಅನುರಾಧ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಈಗಾಗಲೇ ಬಿಸಿಯೂಟ, ಮೊಟ್ಟೆ,ಹಾಲು, ಚಿಕ್ಕಿ ನೀಡುತ್ತಿದೆ. ಇದರ ಜತೆ ಇಂದಿನಿಂದ ಜೊತೆ ರಾಗಿ ಮಾಲ್ಟ್ ಅನ್ನು ಸೋಮವಾರ, ಬುಧವಾರ, ಶುಕ್ರವಾರ ವಿತರಿಸಲಾಗುವುದು ಎಂದರು.

ADVERTISEMENT

ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟಲು ಹಾಗೂ ಮಕ್ಕಳು ಮಧ್ಯಾಹ್ನ ಊಟ ಸೇವಿಸದೇ ಇರಬಾರದು ಎಂಬ ಹಿತದೃಷ್ಟಿಯಿಂದ ಜಾರಿಗೆ ರಾಗಿ ಮಾಲ್ಟ್‌ ವಿತರಣೆ ಜಾರಿಗೆ ತರಲಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ. ಇದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಗಿಯಲ್ಲಿ ಹೆಚ್ಚು ಕಬ್ಬಿಣಾಂಶ, ಪ್ರೋಟೀನ್, ಪೌಷ್ಟಿಕಾಂಶಗಳು ಇದೆ. ಇದರ ಸೇವನೆಯಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಸೇವಿಸಿ ಎಂದು ಹೇಳಿದರು. ಜಿಲ್ಲೆಯ 68,000 ಮಕ್ಕಳಿಗೆ ಯೋಜನೆಯ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಉಪನಿರ್ದೇಶಕ ಕೃಷ್ಣ ಮೂರ್ತಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಪಿಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿ ಲಲಿತಮ್ಮ , ತಾಲ್ಲೂಕು ಶಿಕ್ಷಣಾಧಿಕಾರಿ ಸುಧಾ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.