ವಿಜಯಪುರ(ದೇವನಹಳ್ಳಿ): ಭಕ್ತಿಗೆ ಬಸವಣ್ಣ, ಜ್ಞಾನಕ್ಕೆ ಅಲ್ಲಮಪ್ರಭು ಪ್ರಸಿದ್ಧಿಯಾಗಿರುವಂತೆ ಶೈವಾಚಾರ ನಿರೂಪಣೆಗೆ ಹೆಸರಾದ ಚನ್ನಬಸವಣ್ಣ, ಷಟ್ಸ್ಥಲ ಸಿದ್ಧಾಂತಕ್ಕೆ ಸೂಕ್ತ ತಳಹದಿ ಹಾಕಿ ಸೃಷ್ಟಿಶಾಸ್ತ್ರ ಮತ್ತು ಮನಶಾಸ್ತ್ರ ಬಹುವಿಸ್ತಾರವಾಗಿ ವರ್ಣಿಸಿದ್ದಾರೆ. ಅವರ ವಚನಗಳಲ್ಲಿ ಆತ್ಮಪ್ರತ್ಯಯ, ಸ್ಪಷ್ಟೋಕ್ತಿಗಳಿದ್ದು ಪ್ರಶಂಸಾನಾರ್ಹ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಜಯಚಾಮರಾಜೇಂದ್ರ ಬಡಾವಣೆ ಜೆ.ಸಿ ಉದ್ಯಾನದಲ್ಲಿ ಭಾನುವಾರ ಮಾತೃಮಡಿಲು ಸೇವಾ ಸಂಸ್ಥೆ, ವಚನ ಬಳಗ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಕ್ಷಮ ವತಿಯಿಂದ ಅಂಗವಿಲಕರೊಂದಿಗೆ ಆಯೋಜಿಸಿದ್ದ ಚನ್ನಬಸವಣ್ಣ ಜಯಂತಿ, ಕರ್ನಾಟಕ ರಾಜ್ಯೋತ್ಸವ, ದೀಪಾವಳಿ ಆಚರಣೆಯಲ್ಲಿ ಮಾತನಾಡಿದರು.
ಧಾರ್ಮಿಕ ಚಿಂತಕ ಬಾಬು ರಾಜೇಂದ್ರಪ್ರಸಾದ್ ಮಾತನಾಡಿ, ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡಭಾಷೆಯು ಮಾಯವಾಗುತ್ತಿದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸಬೇಕಾಗಿದೆ. ಭಾಷಾ ಸಮಸ್ಯೆ, ಗಡಿ ಸಮಸ್ಯೆ, ಮಾಧ್ಯಮ ಸಮಸ್ಯೆಗಳು ಅಖಂಡ ಕರ್ನಾಟಕದ ಭಾವನೆಗೆ ಧಕ್ಕೆ ತರುತ್ತಿವೆ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ರಾಜ್ಯದ ಪ್ರತಿ ಕನ್ನಡಿಗರಲ್ಲಿ ಭಾಷಾ ಸ್ವಾಭಿಮಾನ ಹುಟ್ಟು ಹಾಕಬೇಕಿದೆ. ಕನ್ನಡದ ಸ್ಥಿತಿಗತಿ ಅರಿತು ಅವನತಿಯತ್ತ ಸಾಗುತ್ತಿರುವ ಭಾಷೆ ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.
ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಸಕ್ಷಮ ಕಾರ್ಯದರ್ಶಿ ಬಿ.ಎಂ.ಜಗದೀಶ್‌ಕುಮಾರ್ ಮಾತನಾಡಿದರು.
ಕಾರವಾರ ಜಿಲ್ಲೆಯ ಯಲ್ಲಾಪುರದ ಅಂಗವಿಕಲ ಮಗುವಿಗೆ ಗಾಲಿಕುರ್ಚಿ ಮತ್ತು ಅಗತ್ಯ ಪರಿಕರ ವಿತರಿಸಲಾಯಿತು. ವಿದ್ಯಾರ್ಥಿ ಧನುಷ್ ಮತ್ತು ಸಂಗಡಿಗರಿಂದ ಏಕಪಾತ್ರಾಭಿನಯ, ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಕಲಾವಿದ ಮೂರ್ತಿ ಅವರಿಂದ ಜಂಬೆ ವಾದ್ಯವಾದನ ಎಲ್ಲರ ಆಕರ್ಷಣೆಯಾಗಿತ್ತು.
ಮಾಜಿ ಪುರಸಭೆ ಸದಸ್ಯ ಎಸ್.ಭಾಸ್ಕರ್, ಮಾತೃಮಡಿಲು ಸಂಸ್ಥೆ ಎಸ್.ಶಂಕರ್, ವಂದನಾಜಗದೀಶ್, ಮದನ್, ರವಿ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ಶಶಿಕುಮಾರ್, ಶಿಕ್ಷಕ ವಿಜಯಕುಮಾರ್, ಗಾಯಕಿ ಭಾನು, ಪತಂಜಲಿ ಯೋಗಶಿಕ್ಷಣ ಸಮಿತಿಯ ದೀಪಾರಮೇಶ್, ಟೌನ್ ಬಿಜೆಪಿ ಮುಖಂಡ ರವಿಕುಮಾರ್, ಬಳುವನಹಳ್ಳಿ ಕೃಷ್ಣಪ್ಪ, ಸಕ್ಷಮ ಪದಾಧಿಕಾರಿಗಳು, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.