ಹೊಸಕೋಟೆ: ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿನ್ನಾಗರ ಗ್ರಾಮದ ಹೊರವಲಯದ ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣಾ ಕೆಲಸದಲ್ಲಿ ತೊಡಗಿಕೊಂಡಿದ್ದ ಐವರು ಬಾಲ ಕಾರ್ಮಿಕರನ್ನು ಮಂಗಳವಾರ ರಕ್ಷಿಸಲಾಗಿದೆ.
ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ.
ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರದಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ. ರಕ್ಷಿಸಲಾದ ಬಾಲ ಕಾರ್ಮಿಕರನ್ನು ತಾತ್ಕಾಲಿಕ ಪುನರ್ವಸತಿಗಾಗಿ ಸರ್ವೋದಯ ಸರ್ವೀಸ್ ಸೊಸೈಟಿ ಹಾಗೂ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ತೆರೆದ ಮಕ್ಕಳ ತಂಗುದಾಣದಲ್ಲಿ ಸೇರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎಸ್.ಸುಬ್ಬರಾವ್, ಕಾರ್ಮಿಕ ನಿರೀಕ್ಷಕ ಯತೀಶ ಕುಮಾರ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ನಂಜಪ್ಪ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ವಿಜಯಲಕ್ಷ್ಮಿ, ಜಿನ್ನಾಗರ ಶಾಲೆಯ ಮುಖ್ಯೋಪಾಧ್ಯಾಯ ವಿಜಯಾ, ಅಂಗನವಾಡಿ ಶಿಕ್ಷಕಿ ರೇಣುಕಾ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಶಶಿಕುಮಾರ್ ಹಾಗೂ ನರಸಿಂಹ ರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.