ದೊಡ್ಡಬಳ್ಳಾಪುರ: ಕನ್ನಡದ ಹೆಸರಾಂತ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಪುರಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಡಾ.ಎಂ. ಚಿದಾನಂದಮೂರ್ತಿ ಅವರು ಸಂಶೋಧನೆಗೆ ನೀಡಿರುವ ಕೊಡುಗೆ ಅಪಾರ. ಐತಿಹಾಸಿಕ ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ತಂದುಕೊಡುವಲ್ಲಿ ಚಿದಾನಂದಮೂರ್ತಿ ಅವರು ನಿರಂತರ ಹೋರಾಟ ಮಾಡಿದ್ದರು. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿ, ಮಹತ್ವದ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಗೋಕಾಕ್ ಚಳವಳಿ, ಉರ್ದು ವಾರ್ತೆ ವಿರೋಧಿಸಿ ಪ್ರತಿಭಟನೆ, ಮಾತೃಭಾಷಾ ಶಿಕ್ಷಣ,ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ, 370ನೇ ವಿಧಿ ಜಾರಿ ಹೋರಾಟ ಮೊದಲಾಗಿ , ಕನ್ನಡ ನಾಡು ನುಡಿಗಾಗಿ ಬೀದಿಗಿಳಿದು ಹೋರಾಟ ಮಾಡಿದವರಲ್ಲಿ ಚಿಮೂ ಪ್ರಮುಖರು. ಸರೋಜಿನಿ ಮಹಿಷಿ ವರದಿ ಸೇರಿದಂತೆ ಕನ್ನಡದ ಯಾವುದೇ ವಿಚಾರಗಳನ್ನು ಸ್ಪಷ್ಟವಾಗಿ ಅರಿತು ಕನ್ನಡಿಗರ ಬದುಕು ಹಸನಾಗಬೇಕೆಂದು ಪ್ರತಿಪಾದಿಸಿದವರು ಎಂದರು.
ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಯಾವುದೇ ಕನ್ನಡಪರ ಹೋರಾಟಗಳಾಗಲೀ, ಇಲ್ಲಿನ ಕನ್ನಡಪರ ಹೋರಾಟಗಾರರು ಭಾಗವಹಿಸುತ್ತಿದ್ದರು. ಚಿಮೂ ಅವರ ಹೋರಾಟದ ಕಿಚ್ಚು ನಮ್ಮಂತಹ ಕನ್ನಡ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾಗಿತ್ತು ಎಂದು ಸ್ಮರಿಸಿದರು.
ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್ ಮಾತನಾಡಿ, ನೇಕಾರಿಕೆ ನಗರಕ್ಕೆ ಹೆಚ್ಚು ನಂಟು ಹೊಂದಿದ್ದ ಅವರು ಎಲ್ಲ ಹೋರಾಟಗಳಿಗೆ ಮೂಲ ಪ್ರೇರಣೆಯಾಗಿದ್ದರು. ನವೆಂಬರ್ 1 ರಂದು ಕರಾಳ ದಿನವನ್ನು ಆಚರಿಸುವ ಮೂಲಕ ರಾಜ್ಯದ ಸಮಸ್ಯೆಗಳನ್ನು ಪಟ್ಟಿ ಮಾಡಿ ಮನವಿ ಮಾಡುತ್ತಿದ್ದರು. ತನ್ನ ಬದುಕಿನ ಉದ್ದಕ್ಕೂ ನಾಡು, ನುಡಿಯ ಜ್ವಲಂತ ಸಮಸ್ಯೆಗಳ ವಿರುದ್ಧ ನೈಜ ಹೋರಾಟ ಮಾಡಿದ ಮಹಾನ್ ಚೇತನ ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಶಿವಕುಮಾರ್, ಎನ್. ಮಹಾದೇವ್, ಹರಿಕುಮಾರ್, ಸುರೇಶ್, ಹೊನ್ನೂರಪ್ಪ, ಪ್ರದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.