ಹೊಸಕೋಟೆ: ‘ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನ್ನನ್ನು ಸಂಸದನನ್ನಾಗಿ ಆಯ್ಕೆಮಾಡಿ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ, ಬಹುದಿನದ ಬೇಡಿಕೆಯಾದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಎತ್ತಿನಹೊಳೆ ಯೋಜನೆಯನ್ನು ಪೂರ್ತಿಗೊಳಿಸುವೆ’ ಎಂದು ಸಂಸದ ಬಿ.ಎನ್. ಬಚ್ಚೇಗೌಡರು ಹೇಳಿದರು.
ತಾಲ್ಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ಸಂಸದರಾದ ಮೇಲೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
2022 ಮಹಾತ್ಮ ಗಾಂಧಿಯವರ 150ನೇ ಹುಟ್ಟುಹಬ್ಬದ ವರ್ಷವಾಗಿದ್ದು ಅಷ್ಟರೊಳಗಾಗಿ ಭಾರತವನ್ನು ಗುಡಿಸಲು ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಮನೆಯಿಲ್ಲದವರು ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಸೂರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೊಸಕೋಟೆ ತಾಲ್ಲೂಕಿನ ಕೊರಳೂರು ರೈಲ್ವೆ ಕ್ರಾಸಿಂಗ್ ಬಳಿ ಮೇಲ್ಸೇತುವೆ, ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಿ ಸಂಚಾರ ದಟ್ಟಣೆ ನಿವಾರಣೆಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಹೊಸಕೋಟೆಯಲ್ಲಿ ಹಾಲಿನ ಶೀತಲೀಕರಣ ಕೇಂದ್ರ, ಕೈಗಾರಿಕಾ ಪ್ರದೇಶ, ವೋಲ್ವೋ ಕಾರ್ಖಾನೆ, ಮಿನಿ ವಿಧಾನಸೌಧ ಹಾಗೂ ಅನೇಕ ಶಾಲಾ ಕಟ್ಟಡಗಳು ಬಚ್ಚೇಗೌಡರ ಅದಿಕಾರದ ಅವಧಿಯಲ್ಲಿ ಆಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಅನುಷ್ಠಾನವಾಗಲಿದೆ ಎಂದು ರಾಜ್ಯ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಮಂಜುನಾಥ್ ಮಾತನಾಡಿ, ‘ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳಿಕೊಳ್ಳುತ್ತಿದ್ದು ಈ ವಿಷಯವಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.
ಅಧ್ಯಕ್ಷತೆಯನ್ನು ಟಿಎಪಿಸಿಎಂಸ್ ನ ಅಧ್ಯಕ್ಷರಾದ ಕೊಡಿಹಳ್ಳಿ ಸೊಣ್ಣಪ್ಪನವರು ವಹಿಸಿದ್ದರು. ಮುಖಂಡ ಮುನಿಯಪ್ಪ, ಸದಸ್ಯರಾದ ಕೃಷ್ಣಮೂರ್ತಿ, ಟೌನ್ ಬಿಜೆಪಿ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷ ಸುಬ್ಬರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುನಿಲ್, ಯುವ ಮುಖಂಡ ಕಿರಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.