ವಿಜಯಪುರ(ದೇವನಹಳ್ಳಿ): ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಪಂಚಾಯಿತಿ ಪಿಡಿಒ ಮಂಜುನಾಥ್, ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಬೋಧಿಸಿದರು.
ಅಧ್ಯಕ್ಷ ಮುರಳೀಧರ್ ಮಾತನಾಡಿ, ನ.26 ರಂದು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949 ನ.26 ರಂದು ಸಂವಿಧಾನ ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949, ನ.26ರಂದು. ಆದರೂ, ಅನುಷ್ಠಾನಕ್ಕೆ ಬಂದಿದ್ದು 1950 ಜನವರಿ 26ರಂದು. ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲ ಹಕ್ಕುಗಳು, ಕರ್ತವ್ಯ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನಾಗಿದೆ ಎಂದರು.
ಪಿಡಿಒ ಮಂಜುನಾಥ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ ಎಂದರು.
ಭಾರತದ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ. 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ ನಮ್ಮದಾಗಿದೆ. ಭಾರತ ಸಂವಿಧಾನ ಅತಿದೊಡ್ಡ ಕೈಬರವಣಿಗೆ ಡಾಕ್ಯುಮೆಂಟ್ ಹೊಂದಿರುವ ಸಂವಿಧಾನವಾಗಿದೆ. ಇಂಗ್ಲಿಷ್‌ನಲ್ಲಿ ಒಟ್ಟು1,17,369 ಪದಗಳನ್ನು ಹೊಂದಿದೆ. ಸಂವಿಧಾನ ರಚನೆಗೆ ಬ್ರಿಟನ್, ಐರ್ಲ್ಯಾಂಡ್, ಜಪಾನ್, ಯುಎಸ್‌ಎ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆಯಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಸಿಬ್ಬಂದಿ, ಪಂಚಾಯಿತಿ ವ್ಯಾಪ್ತಿಯ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.