ವಿಜಯಪುರ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ಜನಜೀವನ ಸಂಕಷ್ಟಕ್ಕೆ ತುತ್ತಾಗಿದೆ. ಜನ ಹಾಗೂ ಜಾನುವಾರು ಗೃಹಬಂಧನಕ್ಕೆ ದೂಡಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಮಳೆಯಿಂದ ವಾಣಿಜ್ಯ ಬೆಳೆ ರೋಗಗಳಿಗೆ ತುತ್ತಾಗುವ ಆತಂಕ ರೈತರನ್ನು ಕಾಡುತ್ತಿದೆ. ಜನರಲ್ಲಿ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಜಡಿಮಳೆಯಿಂದ ನಿತ್ಯದ ಕೆಲಸ ಕಾರ್ಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಬೆಳಿಗ್ಗೆ ಹೂವು, ಹಣ್ಣು, ತರಕಾರಿ ಮಾರುಕಟ್ಟೆಗೆ ಸಾಗಿಸುವ ರೈತರಿಗೆ ದಿನಪತ್ರಿಕೆ ವಿತರಿಸಲು, ಹಾಲು ಸರಬರಾಜಿಗೆ ಅಡ್ಡಿಯಾಗಿದೆ. ಹಲವು ವಾಣಿಜ್ಯ ಬೆಳೆಗೆ ಬೂದಿರೋಗ ಮತ್ತಿತರ ರೋಗ ಅಂಟಿಕೊಳ್ಳುವ ಆತಂಕ ಶುರುವಾಗಿದೆ.
ಜಡಿಮಳೆ ಕಾರಣದಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹಾಗೂ ಜನರ ಸಂಚಾರವಿಲ್ಲದ ಕಾರಣ, ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಬಿತ್ತನೆಗೂ ತೊಂದರೆ: ಭೂಮಿಯಲ್ಲಿ ತೇವಾಂಶ ಜಾಸ್ತಿಯಿರುವ ಕಾರಣ ಬಿತ್ತನೆ ಮಾಡಲು ಅವಕಾಶವಿಲ್ಲದಂತಾಗಿದೆ ಎಂದು ರೈತ ನಾರಾಯಣಸ್ವಾಮಿ ಹೇಳುತ್ತಾರೆ.
ಅಂಗಡಿಗಳಲ್ಲಿ ಕುಸಿದ ವ್ಯಾಪಾರ: ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಹೊಟೇಲ್, ಸಿನಿಮಾ, ಮಂದಿರಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು.
ವಿದ್ಯಾರ್ಥಿಗಳಿಗೆ ತೊಂದರೆ: ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದ ನಡುವೆ ಮಳೆಯಾಗುತ್ತಿರುವ ಕಾರಣ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ ಎಂದು ಪೋಷಕಿ ನಳಿನಾ ಹೇಳಿದರು.
ನೀರು ನಿಲ್ಲದಂತೆ ಜಾಗ್ರತೆ ವಹಿಸಿ: ತೆಂಗಿನಚಿಪ್ಪು, ಹಳೆ ಟೈರ್, ಡ್ರಂಗಳಲ್ಲಿ ಮಳೆ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮನೆಗಳ ಬಳಿಯಲ್ಲಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಭದ್ರವಾಗಿ ಮುಚ್ಚಿರುವಂತೆ ಜನರು ಜಾಗೃತಿ ವಹಿಸಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.