ಆನೇಕಲ್: ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ 16 ಮಂದಿ ಜೀವಂತವಾಗಿ ಸುಟ್ಟುಹೋದ ಕರಾಳ ಘಟನೆ ಈ ಬಾರಿಯ ಪಟಾಕಿ ವಹಿವಾಟಿಗೆ ಹೊಡೆತ ನೀಡಿದೆ.
ಪ್ರತಿವರ್ಷ ದೀವಾಳಿಗೂ ಮುನ್ನ ಗಡಿಭಾಗದಲ್ಲಿ ಪಟಾಕಿ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿರುತ್ತಿದ್ದವು. ರಸ್ತೆಯುದ್ದಕ್ಕೂ ಪಟಾಕಿ ಅಂಗಡಿಗಳ ಸಾಲು ಕಂಡು ಬರುತ್ತಿತ್ತು. ಕರ್ನಾಟಕ–ತಮಿಳುನಾಡು ಗಡಿಭಾಗವಾದ ಅತ್ತಿಬೆಲೆ ಸುತ್ತಮುತ್ತ ಒಂದೇ ಸ್ಥಳದಲ್ಲಿ 40ಕ್ಕೂ ಹೆಚ್ಚು ಅಂಗಡಿ ಇರುತ್ತಿದ್ದವು. ತಾಲ್ಲೂಕಿನ ಹೆಬ್ಬಗೋಡಿ, ಬೊಮ್ಮಸಂದ್ರ, ಚಂದಾಪುರ, ತಿರುಮಗೊಂಡನಹಳ್ಳಿ ಗೇಟ್, ನೆರಳೂರು, ಯಾರಂಡಹಳ್ಳಿ, ಅತ್ತಿಬೆಲೆಯವರೆಗೂ ಪಟಾಕಿ ಅಂಗಡಿಗಳದ್ದೇ ಅಬ್ಬರ ಇರುತ್ತಿತ್ತು.
ಈ ಸಲ ಪಟಾಕಿ ಅಂಗಡಿಗೆ ಪರವಾನಗಿ ನೀಡಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಿಬಂಧನೆ ಹೆಚ್ಚಾದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ವರ್ತಕರು ನೆರೆಯ ಹೊಸೂರಿಗೆ ವಲಸೆ ಹೋಗಿದ್ದಾರೆ. ಹೊಸೂರು ಸುತ್ತಮುತ್ತ ನೂರಾರು ಪಟಾಕಿ ಅಂಗಡಿ ತಲೆ ಎತ್ತಿವೆ.
ಕಳೆದ ವರ್ಷ ಸಂಭವಿಸಿದ ಪಟಾಕಿ ಅಂಗಡಿ ಬೆಂಕಿ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿ ಮಳಿಗೆ ತೆರೆಯಲು ಕಟ್ಟುನಿಟ್ಟಿನ ನಿಬಂಧನೆ ವಿಧಿಸಿದೆ. ಪಟಾಕಿ ಅಂಗಡಿ ಮತ್ತು ಗೋದಾಮು ಬಳಿ ಅಗ್ನಿಶಾಮಕ ವ್ಯವಸ್ಥೆ, ಮರಳಿನ ಸಂಗ್ರಹ ಮತ್ತು ಮಳಿಗೆಯಿಂದ ಹೊರಬರಲು ವಿಶಾಲವಾದ ಬಾಗಿಲು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಪುರಸಭೆ ಜಂಟಿ ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿಯಲ್ಲಿ ಸುರಕ್ಷತೆಗಾಗಿ ಕೆಲವು ಶಿಫಾರಸು ಮಾಡಲಾಗಿತ್ತು.
ಅದರ ಅನ್ವಯ ಕಾಯಂ ಪರವಾನಗಿ ಹೊಂದಿರುವವರು ಮಾತ್ರ ಪಟಾಕಿ ಅಂಗಡಿ ತೆರೆಯಲು ಅವಕಾಶ ಕೊಡಲಾಗಿದೆ. ಕಳೆದ ವರ್ಷ ಸಂಭವಿಸಿದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಲೋಪದೋಷಗಳನ್ನು ಪತ್ತೆಹಚ್ಚಿ ಜಂಟಿ ಸಮೀಕ್ಷೆಯಲ್ಲಿ ವರದಿ ಮಾಡಲಾಗಿದೆ. ಲೋಪದೋಷ ಸರಿಪಡಿಸಿಕೊಂಡವರಿಗೆ ಮಾತ್ರ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದಾಗಿ ಅತ್ತಿಬೆಲೆ ಪುರಸಭಾ ವ್ಯಾಪ್ತಿಯಲ್ಲಿ 6 ಮಳಿಗೆ ಮತ್ತು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಚಂದಾಪುರ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಪಟಾಕಿ ಅಂಗಡಿ ತೆರೆದಿವೆ. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ 1 ಮಳಿಗೆಗೆ ಮಾತ್ರ ಪರವಾನಗಿ ದೊರೆತಿದೆ.
ಹಸಿರು ಪಟಾಕಿಗೆ ಮಾತ್ರ ಅವಕಾಶ
ಅಂಗಡಿಗಳಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಬೋರ್ಡ್ ಹಾಕಲಾಗಿದೆ. ಕಳೆದ ಒಂದು ವಾರದಿಂದ ವ್ಯಾಪಾರ ನಡೆಯುತ್ತಿದೆ. ವಾರಂತ್ಯಗಳಲ್ಲಿ ಪಟಾಕಿ ಖರೀದಿಸಲು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರು ಅತ್ತಿಬೆಲೆಗೆ ಬಂದಿದ್ದರು. ಹಾಗಾಗಿ ಶನಿವಾರ ಸಂಚಾರ ದಟ್ಟಣೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯ 44ರಲ್ಲಿ ಕಿ.ಮೀಗಟ್ಟಲೇ ವಾಹನಗಳ ಸಾಲು ಕಂಡು ಬಂತು. ಅತ್ತಿಬೆಲೆ ಫ್ಲೈಓವರ್ ದಾಟಿ ಆರ್‌ಟಿಓ ಕಚೇರಿವರೆಗೂ ವಾಹನಗಳ ಸಾಲು ಇತ್ತು. ಬೆಂಗಳೂರು ಹಾಗೂ ಇತರ ಕಡೆಗಳಿಂದ ಬಂದ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಪಟಾಕಿ ಖರೀದಿಸುತ್ತಿದ್ದರು. ‘ಎಂಟು ವರ್ಷಗಳಿಂದ ಅತ್ತಿಬೆಲೆಯಲ್ಲಿ ಪಟಾಕಿ ಅಂಗಡಿ ಇಟ್ಟುಕೊಂಡಿದ್ದೇನೆ. ಕಳೆದ ವರ್ಷ ದುರಂತ ನಡೆದ ಕಾರಣ ನಷ್ಟ ಉಂಟಾಗಿತ್ತು. ಈ ವರ್ಷ ಉತ್ತಮ ವ್ಯಾಪಾರವಾಗುತ್ತಿದೆ. ₹50–₹5 ಸಾವಿರದವರೆಗೆ ವೈವಿಧ್ಯಮಯ ಪಟಾಕಿ ದೊರೆಯುತ್ತವೆ. ಹಸಿರು ಪಟಾಕಿಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ’ ಎಂದು ವರ್ತಕರೊಬ್ಬರು ಹೇಳಿದರು. ಬೆಂಗಳೂರಿನ ಐ.ಟಿ ಉದ್ಯೋಗಿ ಅನೀಶ್ ಪಟಾಕಿ ಕೊಳ್ಳಲು ಅತ್ತಿಬೆಲೆಗೆ ಬಂದಿದ್ದರು. ₹15 ಸಾವಿರ ಬೆಲೆಯ ಪಟಾಕಿ ಖರೀದಿಸಿದ್ದಾಗಿ ಅವರು ಹೇಳಿದರು. ಕಳೆದ ವರ್ಷಕ್ಕಿಂತ ಈ ಸಲ ಶೇ.15 ರಿಂದ 20ರಷ್ಟು ಬೆಲೆ ಹೆಚ್ಚಾಗಿದೆ. ಆದರೂ ಪಟಾಕಿ ಕೊಳ್ಳಲು ಅತ್ತಿಬೆಲೆ ಸೂಕ್ತ ಸ್ಥಳ. ಪ್ರತಿವರ್ಷ ಅತ್ತಿಬೆಲೆಯಲ್ಲಿ ಪಟಾಕಿ ಖರೀದಿಸುತ್ತಿರುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.