ADVERTISEMENT

ವಿಜಯಪುರ: ರೈತರ ತಲುಪದ ಬೆಳೆ ವಿಮೆ ಹಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 13:39 IST
Last Updated 29 ಅಕ್ಟೋಬರ್ 2023, 13:39 IST
ವಿಜಯಪುರ ಹೋಬಳಿ ವೆಂಕಟಗಿರಿಕೋಟೆಯ ಬಳಿ ಮಳೆ ನೀರಿನಿಂದ ಆವೃತ್ತವಾಗಿರುವ ರೈತರೊಬ್ಬರ ತೋಟ
ವಿಜಯಪುರ ಹೋಬಳಿ ವೆಂಕಟಗಿರಿಕೋಟೆಯ ಬಳಿ ಮಳೆ ನೀರಿನಿಂದ ಆವೃತ್ತವಾಗಿರುವ ರೈತರೊಬ್ಬರ ತೋಟ   

ವಿಜಯಪುರ(ದೇವನಹಳ್ಳಿ): ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟ ಆಗಿರುವ ರೈತರಿಗೆ ವರ್ಷ ಕಳೆದರೂ ಇದುವರೆಗೂ ವಿಮೆ ಪರಿಹಾರದ ಹಣ ತಲುಪಿಲ್ಲ.

ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ 365 ರೈತರು ವಿಮೆ ಮಾಡಿಸಿದ್ದರು. ಇವರಲ್ಲಿ ಎಲ್ಲರಿಗೂ ಬೆಳೆನಷ್ಟ ಆಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ರೈತರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ.

‘2021-22ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ದ್ರಾಕ್ಷಿ, ಮಾವು ಸೇರಿ ಹಲವು ಬೆಳೆ ನಷ್ಟವಾಗಿತ್ತು. ಅತಿವೃಷ್ಟಿಗೆ ತುತ್ತಾಗುವ ಮೊದಲೇ ಪ್ರಧಾನಿಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ವಿಮೆ ಕಟ್ಟಿದ್ದೇವೆ. ಬೆಳೆನಷ್ಟ ಆಗಿರುವುದರಿಂದ ಕಳೆದ ಸೆಪ್ಟಂಬರ್‌ನಲ್ಲೆ ವಿಮೆ ಹಣ ರೈತರ ಖಾತೆಗಳಿಗೆ ಜಮೆಯಾಗಬೇಕಾಗಿತ್ತು. ಆದರೆ, ಈ ವರ್ಷ ಅಕ್ಟೋಬರ್ ಕಳೆದು ನವೆಂಬರ್‌ ತಲುಪುತ್ತಿದ್ದರೂ ಜಮೆ ಆಗಿಲ್ಲ’ ಎಂದು ಇಲ್ಲನ ಸ್ಥಳೀಯ ರೈತರು ಆರೋಪಿಸಿದರು.

ADVERTISEMENT

‘ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ, ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆ‌ ಆಗಿಲ್ಲ ಎಂದು ಉತ್ತರ ಕೊಡುತ್ತಾರೆ. ನಾವು ವಿಮೆಯ ಹಣವನ್ನೂ ಕಟ್ಟಿ, ಬೆಳೆ ನಷ್ಟ ಮಾಡಿಕೊಂಡು, ಮುಂದಿನ ಬೆಳೆ ನಾಟಿ ಮಾಡುವುದಕ್ಕೆ ಬಂಡವಾಳವಿಲ್ಲದಂತಾಗಿದೆ’ ಎಂದು ಅಳಲುತೋಡಿಕೊಂಡರು.

‘ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ 365 ರೈತರು, ವಿಮೆ ಮಾಡಿಸಿದ್ದಾರೆ. ಬೆಳೆ ವಿಮೆ ಮಾಡಿಸಿದರೆವರಿಗೆ ಮಾತ್ರ ಪರಿಹಾರ ಬರುತ್ತದೆ. ಸೆಪ್ಟೆಂಬರ್ ತಿಂಗಳಷ್ಟೊತ್ತಿಗೆ ಬ್ಯಾಂಕ್ ಖಾತೆಗಳಿಗೆ ಜಮೆ ಆಗಬೇಕಾಗಿತ್ತು. ಈ ಬಾರಿ ವಿಳಂಬವಾಗಿದೆ. ರೈತರೂ ಇಲಾಖೆಗೆ ಭೇಟಿ ನೀಡಿ, ಕೇಳುತ್ತಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಹೊಂದಾಣಿಕೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಜಮೆ ಆಗದಿರಬಹುದು. ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ದೇವನಹಳ್ಳಿ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿ ಆದರ್ಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.