ADVERTISEMENT

ಪರಿಶ್ರಮ, ಪ್ರಾಮಾಣಿಕತೆಯಿಂದ ಡೇರಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:03 IST
Last Updated 31 ಜುಲೈ 2019, 14:03 IST
ಚನ್ನರಾಯಪಟ್ಟಣ ಹೋಬಳಿ ಜೊನ್ನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಬಮೂಲ್ ನಿದೇರ್ಶಕ ಎಂ.ಮಂಜುನಾಥ್ ಉದ್ಘಾಟಿಸಿದರು
ಚನ್ನರಾಯಪಟ್ಟಣ ಹೋಬಳಿ ಜೊನ್ನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಬಮೂಲ್ ನಿದೇರ್ಶಕ ಎಂ.ಮಂಜುನಾಥ್ ಉದ್ಘಾಟಿಸಿದರು   

ವಿಜಯಪುರ: ಹಾಲು ಉತ್ಪಾದಕರ ಪರಿಶ್ರಮ ಹಾಗೂ ಸಿಬ್ಬಂದಿಯ ಪ್ರಾಮಾಣಿಕತೆಯಿಂದಲೇ ಇಂದು ಡೇರಿಗಳು ಅಭಿವೃದ್ಧಿಯತ್ತ ಸಾಗಲಿಕ್ಕೆ ಅನುಕೂಲವಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಮಂಜುನಾಥ್ ಹೇಳಿದರು.


ಚನ್ನರಾಯಪಟ್ಟಣ ಹೋಬಳಿ ಜೊನ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿಅವರು ಮಾತನಾಡಿದರು.

‘ಹಾಲು ಉತ್ಪಾದನೆ ಕಡಿಮೆಯಾಗದಂತೆ ಉತ್ಪಾದಕರು ಗಮನಹರಿಸಬೇಕು. ಡೇರಿಗಳ ಮೂಲಕ ಉತ್ತಮ ಗುಣಮಟ್ಟದ ಪಶು ಆಹಾರವನ್ನು ಒದಗಿಸಲಾಗುತ್ತಿದೆ. ರಾಸುಗಳಿಗೆ ಹಸಿರುಮೇವಿನ ಕೊರತೆ ನೀಗಿಸಲು ಅಜೋಲಾ ಪರಿಚಯ ಮಾಡಲಾಗಿದೆ. ನೀವು ಉತ್ಪಾದನೆ ಮಾಡುತ್ತಿರುವ ಹಾಲಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರ ಜೊತೆಗೆ ಹಾಲು ಉತ್ಪಾದಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು, ಉತ್ಪಾದಕರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ಮೇವಿನ ಜೋಳ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಸರ್ಕಾರದಿಂದ ಮೇವಿನ ವಿತರಣೆಯನ್ನೂ ಮಾಡಲಾಗಿದೆ. ಇಷ್ಟಾದರೂ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕ ಉಂಟು ಮಾಡುವುದರ ಜೊತೆಗೆ ನಿಮ್ಮ ಕುಟುಂಬಗಳ ನಿರ್ವಹಣೆಗೆ ಕಷ್ಟವಾಗಲಿದೆ’ ಎಂದರು.

ADVERTISEMENT

ಕನಕಪುರದಲ್ಲಿ ಮೆಗಾ ಡೇರಿಯಾಗಿರುವುದರಿಂದ ಪ್ರತಿದಿನ 16 ಲಕ್ಷ ಲೀಟರ್ ಹಾಲು ಬರುತ್ತಿದೆ. ಇದರಿಂದ 10 ಲಕ್ಷ ಲೀಟರ್ ಮಾತ್ರ ಖಾಲಿಯಾಗುತ್ತಿದೆ. ಉಳಿದ 6 ಲಕ್ಷ ಲೀಟರ್ ಆಹಾರ ಉತ್ಪನ್ನಗಳಾಗಿ ತಯಾರಾಗುತ್ತಿದೆ’ ಎಂದರು.

ದೇವನಹಳ್ಳಿ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಗಂಗಯ್ಯ ಮಾತನಾಡಿ, ‘ಕಳೆದ ವರ್ಷದಲ್ಲಿ ಸಂಘಕ್ಕೆ ₹ 5. 81 ಲಕ್ಷ ನಿವ್ವಳ ಲಾಭ ಬಂದಿತ್ತು. ರೈತರಿಗೆ ₹ 2 .78 ಪೈಸೆ ಬೋನಸ್ ನೀಡಲಾಗಿತ್ತು. ಆದರೆ ಈ ಬಾರಿ ₹ 3 .7 ಲಕ್ಷ ಲಾಭ ಬಂದಿದೆ. 2.25 ಪೈಸೆ ಬೋನಸ್ ನೀಡುವ ಬಗ್ಗೆ ಪ್ರಸ್ತಾಪವಾಗಿದೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿರುವುದರ ಪರಿಣಾಮವಾಗಿ ಸಂಘಕ್ಕೆ ಬರುವ ಲಾಭಾಂಶ ಕಡಿಮೆಯಾಗುತ್ತಿದೆ’ ಎಂದರು.

ಡೇರಿ ಅಧ್ಯಕ್ಷ ಜೆ.ಎ.ಮಂಜುನಾಥ್ ಮಾತನಾಡಿ, ‘ಬಮೂಲ್ ವತಿಯಿಂದ ಬರುವ ಅನುದಾನಗಳನ್ನು ಎಲ್ಲಾ ರೈತರಿಗೂ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತದೆ. ರೈತರು ಗುಣಮಟ್ಟದ ಹಾಲು ಪಡೆಯುವುದಕ್ಕೆ ಮಿನರಲ್ ಮಿಕ್ಸರ್, ಗೋದಾರ್ ಶಕ್ತಿ, ಇಂತಹ ಹಲವು ಪೌಷ್ಟಿಕಾಂಶದ ಆಹಾರಗಳನ್ನು ಸಂಘದ ಮುಖಾಂತರ ಪಡೆದುಕೊಂಡು ರಾಸುಗಳಿಗೆ ನೀಡಬೇಕು. ರಾಸುಗಳಿಗೆ ವೈದ್ಯಕೀಯ ಸೇವೆಯನ್ನೂ ವಾರಕ್ಕೊಮ್ಮೆ ನೀಡಲಾಗುತ್ತಿದೆ. ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಕೊಳ್ಳುವುದರ ಜೊತೆಗೆ ರೋಗಗಳನ್ನು ತಡೆಗಟ್ಟಲು ಲಸಿಕೆಗಳನ್ನೂ ಹಾಕಿಸಬೇಕು’ ಎಂದರು.

ಡೇರಿ ಉಪಾಧ್ಯಕ್ಷ ರಾಜಣ್ಣ, ನಿರ್ದೆಶಕರಾದ ಭೈರೇಗೌಡ, ರಾಮದಾಸ್, ಜಾನಕಿರಾಂ, ಜೆ.ಇ.ರಾಮಾಂಜಿನಪ್ಪ, ಎನ್. ರಾಮಾಂಜಿನಪ್ಪ, ನರಸಿಂಹಮೂರ್ತಿ, ರತ್ನಮ್ಮ, ಸುಜಾತಮ್ಮ, ಭಾಗ್ಯಮ್ಮ ಮುಖಂಡ ಶಿವಪ್ರಸಾದ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತ್ಯಾಗರಾಜ್, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.