ಹೊಸಕೋಟೆ: ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳು ದಲಿತರನ್ನು ನಿರ್ಲಕ್ಷ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಗಾಗಿ ಸಂಘಟನೆ ಅವಶ್ಯ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಜಿಲ್ಲಾ ಸಂಚಾಲಕ ಕೊರಳೂರು ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಭಾನುವಾರ ನಡೆದ ಹೊಸಕೋಟೆ ತಾಲ್ಲೂಕು ದಲಿತ ಸಂಘಟನೆಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಜಾತಿನಿಂದನೆ ಪ್ರಕರಣ ಮತ್ತು ಅಂಬೇಡ್ಕರ್ ಪುತ್ಥಳಿ, ಭಾವಚಿತ್ರಗಳಿಗೆ ಅಪಮಾನಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಆದರೆ, ಶಾಸಕರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತಲಿಲ್ಲ. ಅವರಿಗೆ ದಲಿತರ ಮತ ಮಾತ್ರ ಬೇಕು. ದಲಿತರ ರಕ್ಷಣೆ, ಸಮಸ್ಯೆಗಳಿಗೆ ಪರಿಹಾರ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಗೆ ದಲಿತ ಸಂಘಟನೆಗಳ ಸಭೆ ಕರೆದಿದ್ದು ಮುಂದಿನ ರೂಪುರೇಷ ಬಗ್ಗೆ ಚಿಂತನೆ ನಡೆದಿದೆ ಎಂದರು.
ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ರಾಜಕಾರಣಿಗಳ ಮತ ಬ್ಯಾಂಕ್ ಕುತಂತ್ರದಿಂದ ದಲಿತರ ಐಕ್ಯತೆ ಚದುರುತಿದೆ. ದಲಿತರಿಗೆ ಮೀಸಲಾದ ಸಾವಿರಾರು ಕೋಟಿ ಹಣ ದುರ್ಬಳಕೆ ನಡೆಯುತ್ತಿದೆ ಎಂದರು.
ದಲಿತ ಹೋರಾಟಗಾರ ಚಿನ್ನಸ್ವಾಮಿ, ಹರೀಶ್ ಚಕ್ರವರ್ತಿ, ಶಿವಕುಮಾರ್ ಚಕ್ರವರ್ತಿ, ಶ್ರೀಕಾಂತ್ ರಾವಣ್, ಐ.ಆರ್.ನಾರಾಯಣಸ್ವಾಮಿ, ಚಂದ್ರಪ್ಪ, ನಿತಿನ್ ಶ್ರೀನಿವಾಸ್, ಮಂಜುಸೂರ್ಯ, ಡಾ.ಜಿ.ಶ್ರೀನಿವಾಸ್, ದೇವರಾಜು, ಲೋಕೇಶ್, ನರಸಿಂಹಯ್ಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.