ADVERTISEMENT

ದೇವನಹಳ್ಳಿ: ದೀಪೋತ್ಸವ: ವಿವಿಧ ಬಗೆಯ ಹೂವಿನ ಬುಟ್ಟಿಗಳು

ಹಳಿಯೂರು, ಯಲಿಯೂರಿನಲ್ಲಿ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜೂನ್ 2023, 14:01 IST
Last Updated 13 ಜೂನ್ 2023, 14:01 IST
ವಿಜಯಪುರ ಪಟ್ಟಣದಲ್ಲಿ ಹೂವಿನ ವ್ಯಾಪಾರಿ ಮಂಜುನಾಥ್ ಅವರು ದೀಪೋತ್ಸವಕ್ಕಾಗಿ ಸಿದ್ಧಪಡಿಸಿರುವ ಹೂವಿನ ಬುಟ್ಟಿಗಳು
ವಿಜಯಪುರ ಪಟ್ಟಣದಲ್ಲಿ ಹೂವಿನ ವ್ಯಾಪಾರಿ ಮಂಜುನಾಥ್ ಅವರು ದೀಪೋತ್ಸವಕ್ಕಾಗಿ ಸಿದ್ಧಪಡಿಸಿರುವ ಹೂವಿನ ಬುಟ್ಟಿಗಳು   

ವಿಜಯಪುರ (ದೇವನಹಳ್ಳಿ): ಹೋಬಳಿಯ ಹಳಿಯೂರು, ಯಲಿಯೂರು ಗ್ರಾಮಗಳಲ್ಲಿ 21 ವರ್ಷಗಳ ನಂತರ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವ ಹಾಗೂ ದೀಪೋತ್ಸವ ಬುಧವಾರ ಹಮ್ಮಿಕೊಳ್ಳಲಾಗಿದ್ದು, ಸಕಲ ಸಿದ್ಧತೆಗಳು ಭರ್ಜರಿಯಿಂದ ನಡೆಯುತ್ತಿದ್ದರೆ. ಮತ್ತೊಂದೆಡೆ ತಂಬಿಟ್ಟಿನ ದೀಪಗಳಿಗಾಗಿ ವಿವಿಧ ಬಗೆಯ ಹೂವಿನ ಬುಟ್ಟಿಗಳು ಸಿದ್ಧವಾಗುತ್ತಿದ್ದು, ಹೂವಿನ ವ್ಯಾಪಾರಿಗಳ ಬಳಿ ಬೇಡಿಕೆ ಹೆಚ್ಚಾಗಿದೆ.

ಹಳಿಯೂರು, ಯಲಿಯೂರು ಗ್ರಾಮಗಳ ಪ್ರತಿಯೊಂದು ಮನೆಯಲ್ಲೂ ತಂಬಿಟ್ಟಿನ ದೀಪಗಳನ್ನು ತಯಾರು ಮಾಡಲು ಸಕಲ ಸಿದ್ಧತೆಗಳು ನಡೆದಿದ್ದು, ದೀಪಗಳನ್ನು ಮಾಡುವವರು ತಮ್ಮ ಶಕ್ತಾನುಸಾರ ಹೂವಿನ ಬುಟ್ಟಿ ಮಾಡಿಸಲು ಮುಂದಾಗಿದ್ದಾರೆ. ಉಳ್ಳವರು, ಒಂದೊಂದು ದೀಪದ ಬುಟ್ಟಿಗೆ ₹ 25 ರಿಂದ ₹ 50 ಸಾವಿರದವರೆಗೆ ಖರ್ಚು ಮಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು, ₹ 5 ಸಾವಿರದ ಹೂವಿನ ಬುಟ್ಟಿಗಳನ್ನು ತಯಾರು ಮಾಡಿಸುತ್ತಿದ್ದಾರೆ.

ಊರ ಹಬ್ಬ, ಜಾತ್ರೆ, ಉತ್ಸವ ಬಂತೆಂದರೆ ಹಳ್ಳಿಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿರುತ್ತದೆ. ದೂರದ ಸಂಬಂಧಿಕರು, ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಇಂತಹ ಆಚರಣೆಗಳಲ್ಲಿ ಪ್ರಮುಖ ಆಕರ್ಷಣೆ ತಂಬಿಟ್ಟಿನ ದೀಪಗಳಿಗೆ ಅಳವಡಿಸುವ ಹೂವಿನ ಅಲಂಕಾರ. ಜಾತ್ರೆ ಅಂಗವಾಗಿ ಹೂವಿನ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೂವಿನ ವ್ಯಾಪಾರಿಗಳು ಬುಟ್ಟಿ ಹೆಣೆಯುವಲ್ಲಿ ಸಕ್ರಿಯರಾಗಿದ್ದಾರೆ. 

ADVERTISEMENT

ಒಂದು ಹೂವಿನ ಬುಟ್ಟಿ ಹೆಣೆಯಲು ಸುಮಾರು ₹ 2 ಸಾವಿರದವರೆಗೆ ತೆಗೆದುಕೊಳ್ಳುತ್ತಾರೆ. ಸುಂಗಧರಾಜ, ಸೇವಂತಿ, ಗುಲಾಬಿ, ತುಳಸಿ, ಹೂಗಳಿಂದ ಹೆಣೆಯುವ ಬುಟ್ಟಿಗೆ, ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಲಕ್ಷ್ಮೀ, ಗಣೇಶ, ವೆಂಕಟೇಶ್ವರ ಸೇರಿದಂತೆ ವಿವಿಧ ದೇವರುಗಳ, ಮುಖವಾಡಗಳನ್ನು ಹೂಗಳೊಂದಿಗೆ ಹೆಣೆದು, ಬಣ್ಣ ಬಣ್ಣದ ಮಣಿಗಳಿಂದ ಅಲಂಕಾರ ಮಾಡುತ್ತಾರೆ. ಮಲ್ಲಿಗೆ ಹೂಗಳಿಂದ ಬುಟ್ಟಿಯನ್ನು ಹೆಣೆದು ಕೊಟ್ಟರೆ ₹5 ಸಾವಿರವಾಗುತ್ತದೆ ಎಂದು ಹೂವಿನ ವ್ಯಾಪಾರಿ ಮಂಜುನಾಥ್ ಅವರು ತಿಳಿಸಿದರು. 

ಒಂದು ಹೂವಿನ ಬುಟ್ಟಿ ಹೆಣೆಯಲು 25 ಬಿದಿರಿನ ದಬ್ಬೆಗಳನ್ನು ಉಪಯೋಗಿಸಲಾಗುತ್ತದೆ. ಒಂದು ದಬ್ಬೆಗೆ(ಕಡ್ಡಿ) ಹೂವನ್ನು ಸುತ್ತಲು ₹ 30 ಆಗುತ್ತದೆ. ಹೂ ಖರೀದಿ ಎಲ್ಲ ಸೇರಿ ₹1500 ಖರ್ಚಾಗುತ್ತದೆ. ಒಂದು ಬುಟ್ಟಿ ಹೆಣೆಯಲು 3 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಎಂದರು.

ಭರ್ಜರಿ ಹೂವಿನ ವ್ಯಾಪಾರ: ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿನ ಹೂವಿನ ಅಂಗಡಿಗಳಲ್ಲಿ ಭರ್ಜರಿಯಾಗಿ ಹೂವಿನ ವ್ಯಾಪಾರವಾಗುತ್ತಿದ್ದು, ವ್ಯಾಪಾರಿಗಳಲ್ಲಿ ಸಂತಸ ಮೂಡಿದೆ.

ಕುರಿಗಳು ಮಾತ್ರ ಬಲಿ: ಯಲಿಯೂರು ಹಾಗೂ ಹಳಿಯೂರು ಗ್ರಾಮಗಳ ಜಾತ್ರೆಯಲ್ಲಿ ದೇವರಿಗೆ ಕುರಿಗಳನ್ನು ಮಾತ್ರ ಬಲಿಕೊಡಲು ಗ್ರಾಮದ ಹಿರಿಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.