ವಿಜಯಪುರ: ಈ ಭಾಗದ ಮಹತ್ವಾಕಾಂಕ್ಷೆ ಯೋಜನೆ ಎಚ್.ಎನ್ ವ್ಯಾಲಿ ಯೋಜನೆ ಪೂರ್ಣಗೊಂಡಿದ್ದು ವೆಂಕಟಗಿರಿಕೋಟೆ ಕೆರೆಗೆ ನೀರು ಹರಿದಿದೆ. ಸ್ಥಳೀಯ ರೈತರಲ್ಲಿ ಸಂತಸ ಮೂಡಿದೆ.
ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯಿಂದ ಎರಡು ಹಂತದಲ್ಲಿ ಸಂಸ್ಕರಿಸಿದ ನೀರನ್ನು 114 ಕಿ.ಮೀ ಉದ್ದ ಅಳವಡಿಸಿರುವ ಪೈಪ್ ಲೈನ್ ಮೂಲಕ ಬಾಗಲೂರಿನಿಂದ ನೀರು ಪಂಪ್ ಮಾಡಿ ಈ ಭಾಗದ ಕೆರೆಗಳಿಗೆ ನೀರು ಹರಿಸುವುದು ಈ ಯೋಜನೆ ಉದ್ದೇಶ.
ಹೊಸ ಭರವಸೆ: ಪಕ್ಕದ ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ (ಕೋರಮಂಗಲ ಚಲಘಟ್ಟ)ಯೋಜನೆ ರೂಪಿಸಿ ಸಕಾಲದಲ್ಲಿ ಅನುಷ್ಠಾನಗೊಳಿಸಿದರೂ ಗ್ರಾಮಾಂತರ ಜಿಲ್ಲೆ ಕೆರೆಗಳಿಗೆ ಹರಿಯಬೇಕಾಗಿದ್ದ ಹೆಬ್ಬಾಳ ನಾಗವಾರ ವ್ಯಾಲಿ ನೀರು ಸಕಾಲದಲ್ಲಿ ಹರಿಯಲು ಸಾಧ್ಯವಾಗಲಿಲ್ಲ. ಆರು ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷ ಬೇಕಾಯಿತು. ತಡವಾಗಿ ಕಾಮಗಾರಿ ಮುಗಿದರೂ ನೀರು ಹರಿದಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಜಿಲ್ಲೆಯಲ್ಲಿ ಪಾತಾಳಕ್ಕೆ ಕುಸಿದಿರುವ ಅಂತರ್ಜಲ ವೃದ್ಧಿಗೆ ಇದೊಂದು ಆಶಾಭಾವನೆ. ಸರ್ಕಾರ ಈ ಯೋಜನೆಗೆ ಆರಂಭಿಕ ಹಂತವಾಗಿ ₹883 ಕೋಟಿ ವೆಚ್ಚ ಮಾಡಿದ್ದರೂ ಯೋಜನೆ ಪೂರ್ಣಗೊಳ್ಳಲು ₹1 ಸಾವಿರ ಕೋಟಿ ವೆಚ್ವವಾಗಿದೆ. ವಿಷಯ ತಿಳಿದ ಸ್ಥಳೀಯ ರೈತರು, ಕೆರೆಗೆ ನೀರು ಹರಿಯುವುದನ್ನು ನೋಡಿ ಕಣ್ಣು ತುಂಬಿಕೊಂಡರು. ಯುವಕರು, ರೈತರು ನೀರಿಗೆ ಇಳಿದು ಸೆಲ್ಫಿ ತೆಗೆದುಕೊಂಡರು.
ಆತಂಕದಿಂದಲೇ ಸ್ವಾಗತ: ಈ ಹಿಂದೆ ಕೋಲಾರಕ್ಕೆ ಹರಿಸಿದ್ದ ಕೆ.ಸಿ.ವ್ಯಾಲಿ ನೀರು ಬಹುತೇಕ ಕಪ್ಪು ಬಣ್ಣದ ಜೆತೆಗೆ ವಾಸನೆಯಿಂದ ಕೂಡಿತ್ತು.ಆ ಭಾಗದ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ಭಾಗಕ್ಕೆ ಹರಿಯುತ್ತಿರುವ ಎಚ್ಎನ್ ವ್ಯಾಲಿ ನೀರಿನಲ್ಲಿ ಯಾವುದೇ ವಾಸನೆ ಇಲ್ಲದಿರುವುದು ಈ ಭಾಗದ ಜನರಲ್ಲಿ ಸಮಾಧಾನ ತಂದಿದೆ.ಆದರೆ, ಸದ್ಯಕ್ಕೆ ಇದರ ಪರಿಣಾಮ ಗೊತ್ತಿಲ್ಲ.
ಜನರು ಸಂತಸದ ಜತೆಗೆ ಆತಂಕದಿಂದಲೇ ವ್ಯಾಲಿ ನೀರನ್ನು ಸ್ವಾಗತ ಮಾಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ನೀರಿನ ಗುಣಮಟ್ಟ ಜಿಲ್ಲೆಯ ಜನಜೀವನದ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಕಾದು ನೋಡಬೇಕಿದೆ ಎನ್ನುತ್ತಾರೆ ಈ ಭಾಗದ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.