ADVERTISEMENT

ಅತ್ತಿಬೆಲೆಯಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಶಾಸಕ ಬಿ.ಶಿವಣ್ಣ ಮನವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 5:47 IST
Last Updated 23 ನವೆಂಬರ್ 2023, 5:47 IST
ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಕರ್ನಾಟಕ ಜಾಗೃತಿ ದಳ ಆಯೋಜಿಡಸಿದ್ದ ಗಡಿನಾಡ ಜಾಗೃತಿ ಉತ್ಸವದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು
ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಕರ್ನಾಟಕ ಜಾಗೃತಿ ದಳ ಆಯೋಜಿಡಸಿದ್ದ ಗಡಿನಾಡ ಜಾಗೃತಿ ಉತ್ಸವದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು   

ಆನೇಕಲ್ : ಆನೇಕಲ್‌ ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಗಡಿಗೋಪುರದ ಸಮೀಪ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಜಾಗೃತಿ ದಳ ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಆಯೋಜಿಸಿದ್ದ ಗಡಿನಾಡ ಜಾಗೃತಿ ಉತ್ಸವದಲ್ಲಿ ಅವರು ಮಾತನಾಡಿದರು.

ಗಡಿ ತಾಲ್ಲೂಕು ಆನೇಕಲ್‌ ವ್ಯಾಪ್ತಿಯಲ್ಲಿ ತೆಲುಗು, ತಮಿಳು ಭಾಷಿಕರು ಹೆಚ್ಚಾಗಿದ್ದಾರೆ. ಹಾಗಾಗಿ ಅನ್ಯ ಭಾಷಿಕರೊಂದಿಗೆ ಕನ್ನಡದಲ್ಲಿ ಮಾತನಾಡುವ ಜತೆಗೆ ಕನ್ನಡ ಕಲಿಡಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸನ್ಮಾನದ ಬದಲು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ-ನೋಟ್‌ ಪುಸ್ತಕ ಸೇರಿದಂತೆ ಶೈಕ್ಷಣಿಕ ಪರಿಕರ ನೀಡಬೇಕು. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳ ಅಗತ್ಯತೆ ಪೂರೈಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾಗೃತಿ ದಳದ ರಾಜ್ಯ ಘಟಕದ ಅಧ್ಯಕ್ಷ ನಾಗಲೇಖ ಮಾತನಾಡಿ, ಆನೇಕಲ್‌ ತಾಲ್ಲೂಕಿನಲ್ಲಿ ಹಲವು ಕನ್ನಡಪರ ಸಂಘಟನೆಗಳಿವೆ. ನೆಲ-ಜಲ, ನಾಡು-ನುಡಿಯ ವಿಚಾರದಲ್ಲಿ ಸದಾ ದನಿ ಎತ್ತುತ್ತಿವೆ ಎಂದರು.

ನಮ್ಮ ನೆಲದಲ್ಲಿ ಕನ್ನಡ ವಾತಾವರಣ ಮೂಡಿಸಬೇಕಾದುದ್ದು, ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಈ ನಿಟ್ಟಿನಲ್ಲಿ ಅಂಗಡಿಗಳ ಹೆಸರನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಹಾಕಿಸಬೇಕು. ತಾಲ್ಲೂಕಿನ ವಿವಿಧೆಡೆ ಪ್ರಮುಖ ವೃತ್ತಗಳಿಗೆ ಕನ್ನಡ ಕವಿ, ನಟರ ಹೆಸರನ್ನು ನಾಮಕಾರಣ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ, ಆಟೊ ಚಾಲಕರಿಗೆ ಮತ್ತು ಪೌರಕಾರ್ಮಿಕರಿಗೆ ಆಹಾರದ ಕಿಟ್‌ ಮತ್ತು ಬೆಡ್‌ ಶೀಟ್‌ ವಿತರಿಸಲಾಯಿತು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್, ನಾರಾಯಣಸ್ವಾಮಿ ಮೊದಲಿಯಾರ್‌, ಸಿ.ರವೀಂದ್ರ, ಸುಶೀಲಮ್ಮ, ವಿಕಾಸ್‌ರೆಡ್ಡಿ, ಎಂ.ಸಿ.ಹಳ್ಳಿ ವೇಣು, ಗೋವಿಂದರಾಜು, ಧನಲಕ್ಷ್ಮೀ, ಚೇತನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.