ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ 131 ಅಡಿ ಎತ್ತರದ ದೇಶದಲ್ಲಿಯೇ ಅತೀ ದೊಡ್ಡ ಜೋಡಿ ವೀಕ್ಷಣಾ ಗೋಪುರ (ಟ್ವಿನ್ ಟವರ್) ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
ಪ್ರಯಾಣಿಕರಿಗೆ 360 ಡಿಗ್ರಿಯಲ್ಲೂ ವಿಮಾನ ನಿಲ್ದಾಣ ಮತ್ತು ವಿಮಾನ ಹಾರಾಟದ ದರ್ಶನ ಕಲ್ಪಿಸುವ ಸಲುವಾಗಿ ನಿರ್ಮಿಸುತ್ತಿರುವ ಗೋಪುರಗಳ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಎಣಿಕೆಯಂತೆ ನಡೆದರೆ ಇದೇ ಸೆಪ್ಟೆಂಬರ್ 1ರಂದು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಜನವರಿ 15ರಿಂದ ಟರ್ಮಿನಲ್–2ರಿಂದ ದೇಶಿಯ ವಿಮಾನಗಳ ಸಂಚಾರ ಮಾತ್ರ ಪ್ರಾರಂಭವಾಗಿತ್ತು. ಸೆಪ್ಟೆಂಬರ್ 1ರಿಂದ ಇಲ್ಲಿಂದ ಪೂರ್ಣ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭವಾಗಲಿದೆ.
ಈ ವೀಕ್ಷಣಾ ಗೋಪುರದಲ್ಲಿ ವಿದೇಶಗಳಿಗೆ ತೆರಳುವ ಪ್ರಯಾಣಿಕರು ಕೆಲ ಸಮಯ ತಂಗಬಹುದು. ವಿಶ್ರಾಂತಿ ಕೊಠಡಿ ಸೇರಿದಂತೆ ರೆಸ್ಟೋರೆಂಟ್ ವ್ಯವಸ್ಥೆ ಕೂಡ ಇರಲಿದೆ. 131 ಅಡಿ ಎತ್ತರದ ಗೋಪುರದ ಮೇಲ್ಭಾಗದಲ್ಲಿ ನಿಂತು ಪ್ರಯಾಣಿಕರು ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಕಣ್ತುಂಬಿಕೊಳ್ಳಬಹುದು.
ವಿದೇಶಗಳಿಗೆ ತೆರಳುವ ಪ್ರಯಾಣಿಕರು ಇಮಿಗ್ರೇಷನ್ ಪ್ರಕ್ರಿಯೆ ಪೂರ್ಣಗೊಳ್ಳಿಸಿದ ಬಳಿಕ ವಿಮಾನಕ್ಕೆ ಕಾಯುವ ಸಮಯದಲ್ಲಿ ಟ್ವಿನ್ ಟವರ್‌ಗೆ ಭೇಟಿ ನೀಡಬಹುದು.
ಜೋಡಿ ವೀಕ್ಷಣಾ ಗೋಪುರಕ್ಕೆ ‘ಉದ್ಯಾನ ಮಂಟಪ’ (ಗಾರ್ಡನ್ ಪೆವಿಲಿಯನ್) ಎಂದು ಹೆಸರಿಡಲಾಗಿದೆ. ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸೆಪ್ಟೆಂಬರ್ ಒಳಗೆ ಮುಕ್ತಾಯವಾಗಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ವ್ಹೀವಿಂಗ್ ಟವರ್‌ನಿಂದ ಪ್ರೇರಣೆಗೊಂಡು ಈ ಗೋಪುರ ನಿರ್ಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
‘ದೇವನಹಳ್ಳಿ ವಿಮಾನ ನಿಲ್ದಾಣ ಟರ್ಮಿನಲ್–1ರಲ್ಲಿ ಕಾರ್ಯಾಚರಣೆ ಮಾಡುತ್ತಿರುವ 28 ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಶೀಘ್ರದಲ್ಲಿಯೇ ಟರ್ಮಿನಲ್ –2ರಲ್ಲಿ ಕಾರ್ಯಾಚರಣೆ ಆರಂಭಿಸಲಿವೆ. ಇಲ್ಲಿ ನಿರ್ಮಾಣವಾಗುತ್ತಿರುವ ವೀಕ್ಷಣಾ ಗೋಪುರದಲ್ಲಿ ಡೈನಿಂಗ್, ಲಾಂಜ್ ವ್ಯವಸ್ಥೆಯ ಕುರಿತು ಅಧಿಕೃತವಾಗಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.