ದೇವನಹಳ್ಳಿ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿವಶಂಕರ್ ಹಾಗೂ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ಚನ್ನರಾಯಪಟ್ಟಣ ಹೋಬಳಿಯ ರೈತ ಹೋರಾಟಗಾರರೊಂದಿಗೆ ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಯಿತು.
ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ, ವಿವಿಧ ಸಂಘಟನೆಗಳು ಫೆ.16ರಂದು ರೈತ, ಕೂಲಿಕಾರ ಕಾರ್ಮಿಕರು ಒಗ್ಗೂಡಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ರೈತ ಮುಖಂಡರೊಂದಿಗೆ ಅಧಿಕಾರಿಗಳು ಸಮನ್ವಯ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ, ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ್‍ಯಾಲಿ ಮುಂದೂಡುವಂತೆ ಮನವಿ ಮಾಡಿದರು. ವಿಧಾನ ಪರಿಷತ್‌ದ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಗೊಳಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಫೆ.16ರಂದೇ ರಾಜ್ಯ ಸರ್ಕಾರದ ಬಜೆಟ್ ಇದ್ದು ಪ್ರತಿಭಟನೆ ಮುಂದೂಡಬೇಕೆಂದು ಕೋರಿದರು.
ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ರೈತರು, ‘ಈಗಾಗಲೇ ಸರ್ಕಾರದ ಗಮನ ಸೆಳೆದರೂ ಸಹ ಯಾವ ಪ್ರಯೋಜನವು ಆಗಿಲ್ಲ. ಕಳೆದ ಎರಡು ವರ್ಷದಿಂದ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ. ರೈತರ ಪರ ಎಂದು ಹೇಳುವ ಸರ್ಕಾರಗಳು ರೈತ ವಿರೋಧಿಗಳಾಗಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ಹೋಬಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಫೆ.16ರಂದು ಟ್ರ್ಯಾಕ್ಟರ್ ರ್‍ಯಾಲಿ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ರೈತರೆಲ್ಲರೂ ಒಗ್ಗೂಡಿ ಒಂದು ತೀರ್ಮಾನಕ್ಕೆ ಬಂದಿದ್ದು, ನಂತರ ತಮಗೆ ತಿಳಿಸಲಾಗುವುದು ಎಂದು ಸಭೆಯಲ್ಲಿ ರೈತರು ಒಮ್ಮತದಿಂದ ಅಭಿಪ್ರಾಯ ಮಂಡಿಸಿದರು.
ತಹಶೀಲ್ದಾರ್ ಶಿವರಾಜ್, ರೈತರಾದ ಸಿದ್ದಾರ್ಥ, ಶ್ರೀನಿವಾಸ್, ಮಾರೇಗೌಡ, ಅತ್ತಿಬೆಲೆ ನರಸಪ್ಪ, ರಮೇಶ್, ಪ್ರಮೋದ್, ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.