ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ದೇವನಹಳ್ಳಿ ಬಂದ್‌ಗೆ ರೈತರು ಪಂಜಿನ ಮೆರವಣಿಗೆ ಮೂಲಕ ಚಾಲನೆ ನೀಡಿದ್ದಾರೆ. ಪಟ್ಟಣದ ಹಳೆ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಬೆಳ್ಳಂಬೆಳಿಗ್ಗೆ ಪಂಜಿನ ಮೆರವಣಿಗೆ ನಡೆಸಿದರು.
ಮುಖ್ಯರಸ್ತೆಯಲ್ಲಿದ್ದ ಹೋರಾಟಗಾರರನ್ನು ಚದುರಿಸಿದ ಪೊಲೀಸರು ಮುಂಜಾನೆ ಸೃಷ್ಟಿಯಾಗಿದ್ದ ಟ್ರಾಫಿಕ್ ಜಾಮ್ ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವೇಣುಗೋಪಾಲ ಸ್ವಾಮಿ ದೇಗುಲ ರಸ್ತೆಯಲ್ಲಿ ಜಮಾವಣೆಗೊಂಡಿದ್ದ ರೈತರನ್ನು ತಡೆದ ಪೊಲೀಸರು, ರ್‍ಯಾಲಿಗೆ ಅವಕಾಶವಿಲ್ಲ ಎಂದು ಮಾತಿನ ಚಕಮಕಿ ನಡೆಸಿದರು.
'ನೀವೂ ರೈತರ ಮಕ್ಕಳೇ, ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವಾಗ ಸುಳ್ಳು ಭರವಸೆ ನೀಡಿದ್ದ ಪೊಲೀಸರ ಮಾತು ನಂಬುವುದಿಲ್ಲ' ಎಂದು ಕಣ್ಣೀರು ಹಾಕಿ ಬಂದ್‌ಗೆ ಅವಕಾಶ ನೀಡುವಂತೆ ರೈತರು ಮನವಿ ಮಾಡಿದರು.
ಪಟ್ಟಣದ ಚೌಕ ಮಾರ್ಗವಾಗಿ ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಗಿರಮ್ಮ ಸರ್ಕಲ್ ವೃತ್ತದಲ್ಲಿ ಪಂಜು ಹಿಡಿದು ಬಂದ್‌ಗೆ ಸಹಕರಿಸುವಂತೆ ಘೋಷಣೆ ಕೂಗಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಬಸ್ ನಿಲ್ದಾಣದಲ್ಲಿ ತೆರೆದಿದ್ದ ಅಂಗಡಿಗಳಿಗೆ ಭೇಟಿ ನೀಡಿ, ವ್ಯಾಪಾರ ಸ್ಥಗಿತ ಗೊಳಿಸುವಂತೆ, ರೈತರಿಗೆ ಬೆಂಬಲಿಸುವಂತೆ ಪಂಜಿನ ಜಾಥದಲ್ಲಿ ಭಾಗವಹಿಸಿದ್ದ ರೈತರು ಸ್ಥಳೀಯರಿಗೆ ಒತ್ತಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ 1,777 ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ರಾಜ್ಯಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ರೈತರು ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಜಮೀನು ಸ್ವಾಧೀನಪಡಿಸಿಕೊಂಡಲ್ಲಿ, ಈ ಹೋಬಳಿಯ 1,800ಕ್ಕೂ ಹೆಚ್ಚು ಹಿಡುವಳಿದಾರರು ಭೂರಹಿತರಾಗಲಿದ್ದಾರೆ. ತರಕಾರಿ, ಹೂವು, ಹಣ್ಣಿಗಾಗಿ ಬೆಂಗಳೂರು ಮಹಾನಗರವು ಹೆಚ್ಚು ಅವಲಂಬಿಸಿರುವುದು ಇದೇ ದೇವನಹಳ್ಳಿ ತಾಲ್ಲೂಕನ್ನು. ಸಂಪದ್ಭರಿತ ಕೃಷಿ ಜಮೀನು ಕೈಗಾರಿಕೆ ಹೆಸರಿನಲ್ಲಿ ನಾಶವಾದರೆ, ಬೆಂಗಳೂರಿನ ಆಹಾರದ ಬಟ್ಟಲಿಗೇ ಕುತ್ತು ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.