ADVERTISEMENT

ದೇವನಹಳ್ಳಿ: 40 ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ 180 ಮಕ್ಕಳು!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:08 IST
Last Updated 15 ಫೆಬ್ರುವರಿ 2024, 14:08 IST
ದೇವನಹಳ್ಳಿಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಉಪವಿಭಾಗಾಧಿಕಾರಿ ಶ್ರೀನಿವಾಸ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು
ದೇವನಹಳ್ಳಿಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಉಪವಿಭಾಗಾಧಿಕಾರಿ ಶ್ರೀನಿವಾಸ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): 40 ವಿದ್ಯಾರ್ಥಿಗಳು ತಂಗುವ ಸಾಮರ್ಥ್ಯ ಹೊಂದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ 180 ಮಕ್ಕಳಿಗೆ ಪ್ರವೇಶ ನೀಡಲಾಗಿದೆ! 

40 ವಿದ್ಯಾರ್ಥಿಗಳ ಸಾಮರ್ಥ್ಯದ ವಸತಿ ನಿಲಯದಲ್ಲಿ ಸರ್ಕಾರ 140 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಕೊಟ್ಟಿದೆ. ರಾಜಕಾರಣಿಗಳ ಶಿಫಾರಸು, ಒತ್ತಡದಿಂದ ಹೆಚ್ಚುವರಿಯಾಗಿ ಇನ್ನೂ 40 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.

ಇದರಿಂದಾಗಿ 40 ವಿದ್ಯಾರ್ಥಿಗಳಿಗೆ ಸಾಕಾಗುವ ಹಾಸ್ಟೆಲ್‌ನಲ್ಲಿ 180 ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಾದ ಕಾರಣ ಮಕ್ಕಳು ಶೌಚಾಲಯ, ಸ್ನಾನಕ್ಕೂ ಪರದಾಡುತ್ತಿದ್ದಾರೆ.  

ADVERTISEMENT

ಉಪವಿಭಾಗಾಧಿಕಾರಿ ಶ್ರೀನಿವಾಸ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಧವಾರ ಇಲ್ಲಿಯ ಬಿ.ಬಿ ರಸ್ತೆಯ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ವೇಳೆ ಈ ವಿಷಯ ಗೊತ್ತಾಗಿದೆ.

ಇಕ್ಕಟ್ಟಾದ ಜಾಗದಲ್ಲಿಯೇ ಮಕ್ಕಳು ಓದುವುದು, ಮಲಗುವುದು ಸೇರಿದಂತೆ ಎಲ್ಲವನ್ನೂ ಕಷ್ಟದಿಂದ ನಿಭಾಯಿಸುತ್ತಿದ್ದಾರೆ. ವಸತಿ ನಿಲಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಎಂಟು ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಿ ವರ್ಷ ಕಳೆದರೂ ಹಿಂದುಳಿದ ವರ್ಗಗಳ ಜಿಲ್ಲಾ ಮಟ್ಟದ ಅಧಿಕಾರಿ ಅದನ್ನು ಇಲಾಖೆಯ ಸುಪರ್ದಿಗೆ ಪಡೆದುಕೊಂಡಿಲ್ಲ. ಈ ಕುರಿತು ಅಧೀನ ಸಿಬ್ಬಂದಿ ಸಾಕಷ್ಟು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂಬ ವಿಷಯ ಭೇಟಿ ವೇಳೆ ಗೊತ್ತಾಗಿದೆ. 

ವಿದ್ಯಾರ್ಥಿನಿಲಯ ಪರಿಸ್ಥಿತಿಯ ಅವಲೋಕಿಸಿದ ಉಪ ವಿಭಾಗಾಧಿಕಾರಿ ಶ್ರೀನಿವಾಸ್‌, ಮತ್ತೊಮ್ಮೆ ತಾವು ಹಾಸ್ಟೆಲ್‌ಗೆ ದಿಢೀರ್‌ ಭೇಟಿ ನೀಡುವುದಾಗಿ ಅಷ್ಟರಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.

ಈ ವೇಳೆ ವಸತಿ ನಿಲಯಕ್ಕೆ ಬಂದ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ನಿರುಪಮಾ ಸಿ.ಮೌಳಿ ಅವರು ನೀಡಿದ ಸಮಜಾಯಿಷಿಯಿಂದ ತೃಪ್ತರಾಗದ ಉಪವಿಭಾಗಧಿಕಾರಿ, ಅವರನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಸಮಸ್ಯೆ ಇದ್ದರೂ ತ್ವರಿತವಾಗಿ ಬಗೆಹರಿಸಿ ಎಂದು ನಿರ್ದೇಶಿಸಿದರು.

ವಿದ್ಯಾರ್ಥಿಗಳಿಗೆ ನೀಡುವ ಆಹಾರ ಸೇವಿಸಿದ ಅಧಿಕಾರಿಗಳು, ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು. ಸ್ನಾನ, ಶೌಚಕ್ಕೆ ತೊಂದರೆ ಆಗದಂತೆ ಮೂಲಸೌಕರ್ಯ ಸುಧಾರಣೆಗೆ ಗಮನ ಹರಿಸಬೇಕೆಂದು ಸೂಚನೆ ನೀಡಿದರು. ತಹಶೀಲ್ದಾರ್ ಶಿವರಾಜ್‌, ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ವಿನೋದ ಮುಗಳಿ ಇದ್ದರು.

ರಾಜಕಾರಣಿಗಳ ಶಿಫಾರಸ್ಸು

ಯಲಹಂಕ, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿರುವ ಶಾಲೆ ಕಾಲೇಜುಗಳಿಗೆ  ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುವ ಕಾರಣ ದೇವನಹಳ್ಳಿಯಲ್ಲಿರುವ ಹಾಸ್ಟೆಲ್‌ಗಳಿಗೆ ಬೇಡಿಕೆ ಇದೆ. ಸಚಿವರು ಶಾಸಕರು ಮತ್ತು ಅವರ ಸಂಬಂಧಿಗಳು ಸ್ಥಳೀಯ ರಾಜಕೀಯ ಮುಖಂಡರು ದೂರವಾಣಿಯ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ತಂದು ಪರಿಚಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶ ಕೊಡಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿ ನಿಲಯ ಮಕ್ಕಳಿಂದ ತುಂಬಿ ತುಳುಕುತ್ತಿದೆ. 

ಸಿಬ್ಬಂದಿ ಕೊರತೆ

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕರಿಗೆ ಹೆಚ್ಚುವರಿಯಾಗಿ ವಾರ್ಡನ್‌ ಜವಾಬ್ದಾರಿ ನೀಡಲಾಗಿದೆ. ಒಬ್ಬೊಬ್ಬ ವಾರ್ಡನ್‌ಗೆ ಎರಡರಿಂದ ಮೂರು ಹಾಸ್ಟೆಲ್‌ ಉಸ್ತುವಾರಿ ನೀಡಲಾಗಿದೆ. ಇದರಿಂದ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ಎದುರಾಗಿದೆ ಎಂದು‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.