ADVERTISEMENT

ದೇವನಹಳ್ಳಿ | ‘ಪ್ರತಿ ಹಿಂದೂಗಳ ಮನೆಗೂ ಪ್ರಸಾದ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 14:24 IST
Last Updated 31 ಡಿಸೆಂಬರ್ 2023, 14:24 IST
ದೇವನಹಳ್ಳಿ ಪಟ್ಟಣದ ಪತ್ರಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಲರಾಮ ಪ್ರಾಣ ಪ್ರತಿಷ್ಠಾಪನೆಯ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಮುಖಂಡರು
ದೇವನಹಳ್ಳಿ ಪಟ್ಟಣದ ಪತ್ರಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಲರಾಮ ಪ್ರಾಣ ಪ್ರತಿಷ್ಠಾಪನೆಯ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಮುಖಂಡರು   

ದೇವನಹಳ್ಳಿ: ದೇಶದ ಕೋಟ್ಯಂತರ ರಾಮ ಭಕ್ತರು ಸಮರ್ಪಣೆ ಮಾಡಿದ ಹಣದಿಂದ ಶ್ರೀರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣವಾಗಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಮುನ್ನ ಭಾರತದ ಎಲ್ಲಾ ಗ್ರಾಮಗಳಲ್ಲಿರುವ ಪ್ರತಿ ಹಿಂದೂ ಮನೆಗೆ ಪ್ರಸಾದ ಕಳುಹಿಸಿಕೊಡಲಾಗುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸತೀಶ್ ತಿಳಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಕಾರ್ಯಕ್ರಮದ ನೇತೃತ್ವವನ್ನು ವಿಶ್ವ ಹಿಂದೂ ಪರಿಷತ್‌ಗೆ ವಹಿಸಿದೆ. ಪರಿಷತ್ ಪರಿವಾರದ ಎಲ್ಲಾ ಸಂಘಟನೆಗಳು ಮತ್ತು ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನದ ಮೂಲಕ ಆಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರವನ್ನು ತಲುಪಿಸುವ ಯೋಜನೆ ರೂಪಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.1ರಿಂದ 15ರವರೆಗೆ ನಡೆಯುವ ಸಂಪರ್ಕ ಅಭಿಯಾನದಲ್ಲಿ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಎಲ್ಲಾ ಹಿಂದೂ ಮನೆಗಳಿಗೆ ಪ್ರಸಾದ ತಲುಪಿಸಲಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮಲಲಾ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂದರು.

ADVERTISEMENT

ಅಂದು ನಗರ ಮತ್ತು ಗ್ರಾಮಗಳಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಸತ್ಸಂಗ ಮತ್ತು ಭಜನೆ ನಡೆಯಲಿದ್ದು, ದೇವಾಲಯಗಳಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಎಲ್‌ಇಡಿ ಪರದೆಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂಧು ತಿಳಿಸಿದರು.

ಪರಿಷದ್ ಕೋಲಾರ ವಿಭಾಗದ ಕಾರ್ಯದರ್ಶಿ ಗೌರಿಶಂಕರ, ಬಜರಂಗದಳ ಸಂಯೋಜಕ ನರೇಶ್, ಮಣಿಕಂಠ, ಶ್ರೀರಾಮ ಜನ್ಮಭೂಮಿ ಸಂಪರ್ಕ ಅಭಿಯಾನ ಜಿಲ್ಲಾ ಸಂಚಾಲಕ ರವಿಕುಮಾರ್‌, ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.