ದೇವನಹಳ್ಳಿ: ತಾಲ್ಲೂಕಿನ ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆ ರಣರಂಗವಾಗಿ ಮಾರ್ಪಟ್ಟಿತ್ತು.
ಅಧ್ಯಕ್ಷಗಾದಿ ಹಿಡಿಯಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಸದಸ್ಯರನ್ನು ಬಸ್ ಮೂಲಕ ಕರೆತಂದು ಮತದಾನ ಮಾಡಿಸಿದರು.
ಜಿದ್ದಾಜಿದ್ದಿಯಾಗಿ ನಡೆದ ಚುನಾವಣೆಯ ಫಲಿತಾಂಶ ಇನ್ನೇನು ಪ್ರಕಟವಾಗಬೇಕು ಎನ್ನುವಷ್ಟರಲ್ಲಿ ಬಿಗುವಿನ ವಾತಾವರಣ ಸೃಷ್ಟಿ ಆಯಿತು.
ಚುನಾವಣೆ ನಡೆಯುವ ವೇಳೆ ಮೊಬೈಲ್ ಪೋನ್ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಉಪಾಧ್ಯಕ್ಷೆ ಆಕಾಂಕ್ಷಿಯಾಗಿದ್ದ ಪರಾಜಿತ ಅಭ್ಯರ್ಥಿ ವರಲಕ್ಷ್ಮೀ ಅವರು ಫಲಿತಾಂಶ ಘೋಷಣೆಗೂ ಮೊದಲೆ ಗ್ರಾ.ಪಂ. ಕಚೇರಿಯಿಂದ ಹೊರಬಂದು ರಂಪಾಟ ಮಾಡಿದರು.
ತಮ್ಮ ಭಾವಚಿತ್ರವನ್ನು ಕಿಡಿಗೇಡಿಗಳು ಅಶ್ಲೀಲವಾಗಿ ಚಿತ್ರಿಸಿ ವ್ಯಾಟ್ಸ್‌ಆ್ಯಪ್ ಮೂಲಕ ಹರಿ ಬಿಟ್ಟಿದ್ದಾರೆ. ಈ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಚುನಾವಣಾ ಹಿಂದಿನ ದಿನ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರ ಮುಂದೆ ಅಭ್ಯರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದರಿಂದ ಪಂಚಾಯಿತಿ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿ ಆಯಿತು.
ಪಂಚಾಯಿತಿ ಕಚೇರಿ ಆವರಣದಲ್ಲಿ ಜನರು ಜಮಾವಣೆಯಾದರು. ಎಚ್ಚೆತ್ತ ಪೊಲೀಸರು ಜನರ ಗುಂಪು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.