ADVERTISEMENT

ಭ್ರೂಣ ಹತ್ಯೆ ಪ್ರಕರಣ ವರದಿ: ಅಧಿಕಾರಿಗಳ ಕಿತ್ತಾಟ!

ವರದಿ ಸಲ್ಲಿಸದಂತೆ ಕಿರುಕುಳ: ಆಯುಕ್ತಾಲಯಕ್ಕೆ ಡಿಎಚ್‌ಒ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:57 IST
Last Updated 21 ಮಾರ್ಚ್ 2024, 15:57 IST
 ಡಾ.ಎಸ್‌.ಆರ್‌.ಮಂಜುನಾಥ್‌ , ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ 
 ಡಾ.ಎಸ್‌.ಆರ್‌.ಮಂಜುನಾಥ್‌ , ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ    

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ನಡೆದ ಭ್ರೂಣ ಹತ್ಯೆ, ಕಾನೂನು ಬಾಹಿರ ಗರ್ಭಪಾತ ಪ್ರಕರಣದ ವರದಿ ಸಲ್ಲಿಸದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಸುನೀಲ್‌ ಕುಮಾರ್‌  ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಆರ್‌.ಮಂಜುನಾಥ್‌ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯಕ್ಕೆ ದೂರು ಸಲ್ಲಿಸಿದ್ದಾರೆ.

‘ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿಯ ಎಸ್‌ಪಿಜಿ ಆಸ್ಪತ್ರೆಯಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣ ಹಾಗೂ ನೆಲಮಂಗಲದ ಆಸರೆ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ 74 ಗರ್ಭಪಾತ ಮಾಡಿದ ಪ್ರಕರಣದ ವರದಿಯನ್ನು ಡಿಎಚ್‌ಒಗೆ ಮೌಖಿಕವಾಗಿ ತಿಳಿಸಿದೆ. ಆಗ ಅವರು, ಲಿಖಿತ ವರದಿ ಸಲ್ಲಿಸದಂತೆ ತಾಕೀತು ಮಾಡಿದರು. ಅಲ್ಲದೇ, ವರದಿ ಸಲ್ಲಿಸಿದರೆ ಸಮಸ್ಯೆ ಎದುರಿಸಬೇಕಾದಿತು ಎಂದು ಬೆದರಿಕೆಯನ್ನೂ ಹಾಕಿದರು’ ಎಂದು ಡಾ. ಮಂಜುನಾಥ್‌ ಆರೋಪಿಸಿದ್ದಾರೆ.

‘ವರದಿ ಸಲ್ಲಿಸದಂತೆ ಪ್ರತಿಕೂಲ ಸನ್ನಿವೇಶ ಸೃಷ್ಟಿಸಲು ಪದೇ ಪದೇ ನೋಟಿಸ್‌ ನೀಡಿ ಕಿರುಕುಳ ನೀಡಿದರು. ಒತ್ತಡ ಲೆಕ್ಕಿಸದೆ ಮಾರ್ಚ್‌ 18ರಂದು ಡಿಎಚ್‌ಒ ಕಚೇರಿ ಟಪಾಲಿಗೆ ಲಿಖಿತ ವರದಿ ಸಲ್ಲಿಸಿದ್ದೇನೆ. ತಮ್ಮ ಪ್ರಾಣಕ್ಕೆ ಏನಾದರೂ ತೊಂದರೆಯಾದರೇ ಅದಕ್ಕೆ ಡಿಎಚ್‌ಒ ಡಾ.ಸುನೀಲ್‌ ಕುಮಾರ್‌ ಕಾರಣ’ ಎಂದು ಆಯುಕ್ತಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT
ಡಾ.ಸುನೀಲ್‌ ಕುಮಾರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

ದೂರಿಗೆ ಸಂಬಂಧಿಸಿದಂತೆ ಸರ್ಕಾರಿ ಸೇವಾ ನಿಯಮಾವಳಿಗಳ ಅಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನನಗೆ ಅವಕಾಶವಿಲ್ಲ. ಅಗತ್ಯವಿದ್ದರೆ ಜಿಲ್ಲಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಾರೆ.

– ಡಾ.ಸುನೀಲ್‌ ಕುಮಾರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.