ದೇವನಹಳ್ಳಿ: ನಕಲಿ ದಾಖಲೆ, ಕಾನೂನು ಬಾಹಿರ ನಿಷೇಧಿತ ದಸ್ತಾವೇಜುಗಳನ್ನು ನೋಂದಣಿ ಮಾಡುವ ನೋಂದಣಾಧಿಕಾರಿಗಳಿಗೆ ಮೂರು ವರ್ಷ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಿರುವ ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2023 ವಿರೋಧಿಸಿ ರಾಜ್ಯದ ಬಹುತೇಕ ಉಪ ನೋಂದಣಾಧಿಕಾರಿಗಳು ಕಳೆದ ಮೂರು ದಿನಗಳಿಂದ ಅಸಹಕಾರ ಚಳವಳಿ ನಡೆಸುತ್ತಿದ್ದಾರೆ.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿರುವ ತಾಲ್ಲೂಕು ಉಪ ನೋಂದಣಾಧಿಕಾರಿಗಳ ಕಚೇರಿಯೂ ಕಳೆದ ಮೂರು ದಿನಗಳಿಂದ ಬಿಕೊ ಎನ್ನುತ್ತಿವೆ. ವಿವಿಧ ಆಸ್ತಿಗಳ ನೋಂದಣಿಗಾಗಿ ಆನ್‌ಲೈನ್ (ಕಾವೇರಿ 2.0) ತಂತ್ರಾಂಶದಲ್ಲಿ ಸಮಯ ನಿಗದಿ ಮಾಡಿಕೊಂಡು ಬಂದಿರುವ ಸಾರ್ವಜನಿಕರು ವಾಪಸ್ ತೆರಳುತ್ತಿದ್ದಾರೆ.
ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಆಸ್ತಿಗಳ ನೋಂದಣಿ ಮಾಡುವ ದೇವನಹಳ್ಳಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಒಟ್ಟು ಮೂವರು ನೋಂದಣಾಧಿಕಾರಿ ನಿಯೋಜನೆ ಮಾಡಿದ್ದರೂ ಅವರೆಲ್ಲರೂ ಕರ್ತವ್ಯಕ್ಕೆ ಗೈರಾಗಿದ್ದಾರೆ.
ನೋಂದಣಿ ಸಂಬಂಧ ಕಚೇರಿಗೆ ಬರುವ ಸಾರ್ವಜನಿಕರಿಗೆ ಹೊಸ ಕಾಯಿದೆ ಅನುಷ್ಠಾನ ವಿರೋಧಿಸಿ ಯಾವುದೇ ನೋಂದಣಿ ಮಾಡುತ್ತಿಲ್ಲ ಎಂದು ಲಭ್ಯವಿರುವ ಸಿಬ್ಬಂದಿ ಅಸಹಕಾರ ವ್ಯಕ್ತಪಡಿಸುತ್ತಿದ್ದಾರೆ.
ಅ.19 ರವರೆಗೆ ದಿನಾಂಕ, ಸಮಯ ಕಾಯ್ದಿರಿಸಿ ಮುದ್ರಾಂಕ ಶುಲ್ಕ ಪಾವತಿಸಿರುವವರ ದಸ್ತಾವೇಜುಗಳನ್ನಷ್ಟೇ ಕೆಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಮಾಡಲಾಗಿದೆ. ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮದ ಕುರಿತು ಕೇಂದ್ರ ಕಚೇರಿಯಿಂದ ಸೂಕ್ತ ನಿರ್ದೇಶನ ಬರುವವರೆಗೆ ದಸ್ತಾವೇಜುಗಳ ಪರಿಶೀಲನೆ, ನೋಂದಣಿ ಮಾಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಯಾವುದು ನಿಷೇಧಿತ ದಾಖಲೆಗಳು?: ನಕಲಿ ದಸ್ತಾವೇಜುಗಳು, ಕೇಂದ್ರ ಅಧಿನಿಯಮ ಅಥವಾ ರಾಜ್ಯ ಅಧಿನಿಯಮದ ಮೂಲಕ ನಿಷೇಧಿಸಿರುವ ವ್ಯವಹಾರಕ್ಕೆ ಸಂಬಂಧಿಸಿದ ದಸ್ತಾವೇಜುಗಳು, ಕೇಂದ್ರ, ರಾಜ್ಯ ಅಧಿನಿಯಮ, ಸಕ್ಷಮ ಪ್ರಾಧಿಕಾರ, ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಶಾಶ್ವತವಾಗಿ ಇಲ್ಲವೇ ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದ ಯಾವುದೇ ಸ್ವತ್ತಿನ ಮಾರಾಟ, ದೇಣಿಗೆ, ಗೇಣಿ, ಇತರೆ ರೂಪದಲ್ಲಿ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಇಂಥ ದಸ್ತಾವೇಜುಗಳ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾನೋಂದಣಾಧಿಕಾರಿಗಳಿಗೆ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್‌ಗಳು ನಿಯಮ ಉಲ್ಲಂಘಿಸಿ ನಕಲಿ ದಸ್ತಾವೇಜುಗಳನ್ನು ನೋಂದಣಿ ಮಾಡಿದರೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ನೂತನ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇ–ಖಾತಾ ಕಡ್ಡಾಯ: ಹೆಚ್ಚಿದ ಭ್ರಷ್ಟಾಚಾರ: ನೋಂದಣಿ ಮಾಡಿಸಲು ಇ ಖಾತೆಯೂ ಕಡ್ಡಾಯವಾಗಿ ಬೇಕಿರುವುದರಿಂದ ಗ್ರಾಮ ಪಂಚಾಯಿತಿ ಸೇರಿದಂತೆ ಪುರಸಭೆ, ನಗರ ಸಭೆಗಳಲ್ಲಿ ಇ– ಖಾತೆಗೆ ಅರ್ಜಿ ಸಲ್ಲಿಸುತ್ತಿರುವ ಆಸ್ತಿ ಮಾಲೀಕರನ್ನು ಲೂಟಿ ಹೊಡೆಲಾಗುತ್ತಿದೆ. ತುರ್ತಾಗಿ ಖಾತೆ ಬೇಕಿದ್ದರೇ ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದೇ ಎಲ್ಲ ದಾಖಲೆಗಳು ಸರಿಯಿದ್ದರೂ ಕ್ಷುಲ್ಲಕ ಕಾರಣ ಹೇಳಿ ಅರ್ಜಿ ವಜಾ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಿರಾಸ್ತಿಗಳ ಕ್ರಯ, ದಾನ ಪತ್ರ, ವಿಭಾಗ ಪತ್ರ, ಹಕ್ಕು ಬಿಡುಗಡೆ ಸೇರಿ ವಿವಿಧ ಕರಾರು ಪತ್ರಗಳನ್ನು ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ.
ಆನ್‌ಲೈನ್ ವ್ಯವಸ್ಥೆ ದೊಡ್ಡ ಸರ್ಕಸ್: ಸ್ವತ್ತಿನ ನೋಂದಣಿ ಮಾಡಿಸುವುದು ದೊಡ್ಡ ಸರ್ಕಲ್ ಆಗಿದೆ. ಮೊದಲಿಗೆ ಕಾವೇರಿ 2.0 ತಂತ್ರಾಂಶದಲ್ಲಿ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡಿ ತದನಂತರ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಬೇಕಿದೆ. ಅಲ್ಲಿ ಸಲ್ಲಿಕೆ ಮಾಡಿರುವ ದಾಖಲೆ ಪರಿಶೀಲನೆ ಮಾಡಿದ ನಂತರ ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು. ಆ ಮೇಲೆ ಲಭ್ಯವಿರುವ ದಿನದಂದು ದಿನಾಂಕ, ಸಮಯ ನಿಗದಿ ಪಡಿಸಿಕೊಳ್ಳಬೇಕಿದ್ದು, ಇದನ್ನು ಸಾರ್ವಜನಿಕರು ಮಧ್ಯವರ್ತಿಗಳ ಸಹಾಯವಿಲ್ಲದೇ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಹೆಚ್ಚಾಗಿದೆ.
ಈಗಾಗಲೇ ಕಂದಾಯ ಇಲಾಖೆಯಲ್ಲಿ ಜಾರಿಯಲ್ಲಿರುವಂತೆ ಗ್ರಾಪಂ ಪುರಸಭೆ ನಗರಸಭೆಗಳಲ್ಲಿ ಖಾತೆಗೆ ಅರ್ಜಿ ಸಲ್ಲಿಸಿ 7 ದಿನದಲ್ಲಿ ಖಾತೆಯನ್ನು ವಿತರಣೆ ಮಾಡುವ ಪಾರದರ್ಶಕ ವ್ಯವಸ್ಥೆಯನ್ನು ಮಾಡಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.- ನವೀನ್ ಕುಮಾರ್.ಬಿ.ಸಿ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.