ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹7.76 ಕೋಟಿ ಮೌಲ್ಯದ 8,053 ಕ್ಯಾರೆಟ್ ತೂಕದ ವಜ್ರಗಳು, ₹4.62 ಲಕ್ಷ ಮೊತ್ತದ ಅಮೆರಿಕ ಡಾಲರ್ ಮತ್ತು ದಿರ್‌ಹಂ ಕರೆನ್ಸಿ ವಶ ಪಡಿಸಿಕೊಳ್ಳಲಾಗಿದೆ.
ಕಳ್ಳಸಾಗಣೆ ಮಾಡಲು ಯತ್ನಿಸಿದ ಚಿಕ್ಕಬಳ್ಳಾಪುರದ ಇಬ್ಬರು ಪ್ರಯಾಣಿಕರನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬುಧವಾರ (ಜ.10) ಬಂಧಿಸಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ವಜ್ರಗಳನ್ನು ತಂದಿದ್ದ ಈ ಇಬ್ಬರೂ ಅವನ್ನು ಚಾಕೊಲೇಟ್ ಪ್ಯಾಕ್‌ನಲ್ಲಿ ಬಚ್ಚಿಟ್ಟು ದುಬೈಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸುಳಿವು ದೊರೆತಿತ್ತು. ರನ್ ವೇ ಬೇಯಲ್ಲಿ ದುಬೈಗೆ ಹಾರಲು ಸಿದ್ಧವಾಗಿದ್ದ ವಿಮಾನದಲ್ಲಿ ಅಧಿಕಾರಿಗಳ ತಂಡ ತಪಾಸಣೆ ನಡೆಸಿದಾಗ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಾಕೊಲೇಟ್ ಪ್ಯಾಕ್‌ನಲ್ಲಿ ಅಡಗಿಸಿ ಇಡಲಾಗಿದ್ದ ವಜ್ರಗಳು ಪತ್ತೆಯಾಗಿವೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೈದರಾಬಾದ್ ವಿಮಾನ ನಿಲ್ದಾಣದಿಂದ ಕಳ್ಳ ಸಾಗಣೆ ಜಾಲದ ಮತ್ತಿಬ್ಬರು ಸದಸ್ಯರು ಇನ್ನಷ್ಟು ವಜ್ರಗಳನ್ನು ದುಬೈಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ತಕ್ಷಣ ಅಧಿಕಾರಿಗಳು ಹೈದರಾಬಾದ್ ಗುಪ್ತಚರ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅದೇ ದಿನ ಬೆಳಗ್ಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ₹6.03 ಕೋಟಿ ಬೆಲೆಬಾಳುವ ವಜ್ರಗಳು ಹಾಗೂ ₹9.83 ಲಕ್ಷ ಮೊತ್ತದ ಅಮೆರಿಕ ಡಾಲರ್ ಕರೆನ್ಸಿ ವಶ ಪಡಿಸಿಕೊಂಡಿದ್ದಾರೆ. ವಜ್ರ ಕಳ್ಳ ಸಾಗಣೆ ಜಾಲದ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.