ದೇವನಹಳ್ಳಿ: ರೈತರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ಚನ್ನರಾಯಪಟ್ಟಣದಲ್ಲಿ ಭೂ ಸ್ವಾಧೀನ ವಿರೋಧಿಸಿ ಕಳೆದೊಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟಕ್ಕೆ ಸರ್ಕಾರ ಸ್ಪಂದಿಸದೆ, ಭೂ ಕಬಳಿಕೆಗೆ ಹುನ್ನಾರ ನಡೆಸುತ್ತಿದೆ ಎಂದು ವಕೀಲ ಸಿದ್ಧಾರ್ಥ ದೂರಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಕೊಯಿರ ಗ್ರಾಮದಲ್ಲಿ ನಡೆಸಿದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
‘ಫಲವತ್ತಾದ ಭೂಮಿಯನ್ನು ಹೊಂದಿರುವ ರೈತರನ್ನು ಒಕ್ಕಲೆಬ್ಬಿಸಿ, ಅವರಿಂದ ಬಲವಂತವಾಗಿ ಭೂಮಿ ಕಿತ್ತು ಕೊಳ್ಳುವುದು ಪ್ರಜಾಪ್ರಭುತ್ವವೇ?’ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿ ಇಲ್ಲ. ಇದರಿಂದ ರೈತರು ಪ್ರತಿ ವಿಷಯಕ್ಕೂ ಹೋರಾಟ ಮಾಡಬೇಕಿದೆ. ಅದರೂ ನ್ಯಾಯಾ ಸಿಗದೆ ಇರುವುದು ದುರಂತ ಎಂದು ಬೇಸರ
ವ್ಯಕ್ತಪಡಿಸಿದರು.
ಕೆಐಎಡಿಬಿ ಬಲವಂತದ ಭೂ ಸ್ವಾಧೀನವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಭೂಸ್ವಾಧೀನ ಹೋರಾಟ ಸಮಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಕೃಷಿ ಭೂಮಿ ಉಳಿವಿಗೆ ಅನ್ನದಾತ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾನೆ. ಆದರೆ ಸರ್ಕಾರ ಮೌನ ವಹಿಸಿದೆ. ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರ ಜೀವನಾಡಿಯಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದಿಕ್ಕಾರವಿರಲಿ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಪಾದಯಾತ್ರೆ ಫೆ.20ರಿಂದ ಆರಂಭಗೊಂಡಿದ್ದು, ಮಾರ್ಚ್ 3ರಂದು ದೇವನಹಳ್ಳಿ ಸಂತೆ ಮೈದಾನದಲ್ಲಿ ಕೊನೆಗೊಳ್ಳಲಿದೆ ಎಂದು
ತಿಳಿಸಿದರು.
ರೈತ ಮುಖಂಡ ಕೊಯಿರ ಚಿಕ್ಕೇಗೌಡ ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ನಮ್ಮ ಭೂಮಿ ಉಳಿವಿಗೆ ಹೋರಾಟ ಮಾಡಿದರೆ ಗೂಂಡಾಗಳು ಎನ್ನುತ್ತಾರೆ. ಇಂತಹ ಪ್ರಜಾವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡರಾದ ನಂಜಪ್ಪ, ಸೂರ್ಯ ತೇಜಸ್, ಅಶ್ವತ್ಥ್, ಮಾರೇಗೌಡ, ವೆಂಕಟರಮಣಪ್ಪ, ಗೋಪಾಲಪ್ಪ, ಮಂಜುನಾಥ್, ಮೋಹನ್, ಬೀರಸಂದ್ರ ರವಿ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು, ರೈತ ಮಹಿಳೆಯರು, ಸಾರ್ವಜನಿಕರು, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.