ADVERTISEMENT

ದೇವನಹಳ್ಳಿ: ಶಾಲೆಯಿಂದ ಹೊರಗುಳಿದ ಒಂಬತ್ತು ಮಕ್ಕಳ ರಕ್ಷಣೆ

ಕಸ ವಿಂಗಡಣೆ ಘಟಕದ ಮೇಲೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:16 IST
Last Updated 21 ಜೂನ್ 2024, 5:16 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿಯಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಸರ್ಕಾರಿ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದರು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿಯಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಸರ್ಕಾರಿ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದರು   

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದ ಮೇಲೆ‌ ವಿವಿಧ ಇಲಾಖೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ, ಶಾಲೆಯಿಂದ ಹೊರಗುಳಿದ ಒಂಬತ್ತು ಮಕ್ಕಳ ರಕ್ಷಣೆ ಮಾಡಿದ್ದಾರೆ.

ಮಕ್ಕಳ ಸಹಾಯವಾಣಿಗೆ ಬ೦ದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿತು.

ತಪಾಸಣೆ ವೇಳೆಯಲ್ಲಿ ಯಾವುದೇ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಪತ್ತೆ ಆಗಲಿಲ್ಲ‌. ಆದರೆ ಶಾಲೆಯಿಂದ ಹೊರ ಉಳಿದ ಒಂಬತ್ತು ಮಕ್ಕಳು ಪೋಷಕರ ಜತೆಗಿದ್ದರು. ಇವರು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದವರು. ಮಕ್ಕಳನ್ನು ತಾಲ್ಲೂಕಿನ ವಿಜಯಪುರದ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಪುನರ್ವಸತಿಗೊಳಿಸಿ, ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಲಾಯಿತು.

ADVERTISEMENT

ಮುಂದಿನ ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗುವುದು. ಅಲ್ಲಿ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಸ ವಿಂಗಡಣೆ ಘಟಕದಲ್ಲಿ ಕಾರ್ಮಿಕರಿಗೆ ಮೂಲ ಸೌಕರ್ಯ ಇಲ್ಲದಿರುವುದನ್ನು ಗಮನಿಸಿದ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರನ್ನು ಕಸ ವಿಂಗಡಣೆ ಘಟಕದಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸಲು ಅಗತ್ಯ ಮೂಲ ಸೌಕರ್ಯ ಒಳಗೊಂಡ ಶೆಡ್ ನಿರ್ಮಿಸಿಕೊಡಬೇಕೆಂದು ಕಸ ವಿಂಗಡಣೆ ಘಟಕದ ಗುತ್ತಿಗೆದಾರರಿಗೆ ಸೂಚಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎಸ್. ಸುಬ್ಬಾರಾವ್, ಕಾರ್ಮಿಕ ನಿರೀಕ್ಷಕ ಅಂಬಿಕಾ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜು, ಬಿಇಓ ಕಚೇರಿಯ ನಾಗಪ್ಪ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೌಮ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.