ADVERTISEMENT

ದೇವನಹಳ್ಳಿ ಧಾರಾಕಾರ ಮಳೆ: ನೆರಕುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:25 IST
Last Updated 10 ಮೇ 2024, 15:25 IST
ದೇವನಹಳ್ಳಿ ಬೊಮ್ಮವಾರ ಬಳಿ ಧಾರಕಾರ ಮಳೆಯಿಂದಾಗಿ ನೆಲಕುರುಳಿರುವ ಬೇವಿನ ಮರ
ದೇವನಹಳ್ಳಿ ಬೊಮ್ಮವಾರ ಬಳಿ ಧಾರಕಾರ ಮಳೆಯಿಂದಾಗಿ ನೆಲಕುರುಳಿರುವ ಬೇವಿನ ಮರ   

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಭಾಗದಲ್ಲಿ ಶುಕ್ರವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಮಳೆ ಬಿದ್ದ ರಭಸಕ್ಕೆ ಸಾಕಷ್ಟು ಮರಗಳು ಧರೆಗುರುಳಿದ್ದು, ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಗುಂಡಿಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು.

ದೇವನಹಳ್ಳಿ ಪಟ್ಟಣದಿಂದ ಐವಿಸಿ ರಸ್ತೆ, ಅಕ್ಕು ಪೇಟೆ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರೈಲ್ವೆ ಕೇಳ ಸೇತುವೆಗಳಲ್ಲಿ ಮಳೆ ನೀರು ನಿಂತು, ವಾಹನ ಸವಾರರು ಪರದಾಡಿದರು.

ಪ್ರತಿ ಬಾರಿ ಮಳೆ ಬಂದಾಗಲೂ ಪುರಸಭೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಸಂಕಷ್ಟ ಎದುರಿಸಬೇಕಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹಲವೆಡೆ ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಇಳಿಜಾರು ಪ್ರದೇಶಗಳಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯಿತು.  ಕುಂದಾಣ ಭಾಗದ ಬಂಡೆ ಪ್ರದೇಶದಿಂದ ಹರಿದು ಬಂದ ಮಳೆ ನೀರು ಹೊಲಗಳಿಗೆ ನುಗ್ಗಿದ್ದು, ಕಳೆ ಸಮೇತ ಮಣ್ಣನ್ನು ಹೊತ್ತು ರಭಸವಾಗಿ ಹರಿದು ಚರಂಡಿಗಳು ತುಂಬಿಕೊಂಡಿದ್ದವು.

ಪುರಸಭೆ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ಚರಂಡಿಗಳ ಸೂಕ್ತ ನಿರ್ವಹಣೆ ಇಲ್ಲದ ಕಾರಣದಿಂದಾಗಿ ಮಳೆ ನೀರಿನೊಂದಿಗೆ ಚರಂಡಿ ತ್ಯಾಜ್ಯವೂ ಮನೆಗಳಿಗೆ ನುಗ್ಗಿದ್ದು, ವೇಣು ಗೋಪಾಲ ಸ್ವಾಮಿ ದೇಗುಲದ ರಾಜ ಬೀದಿಯೂ ಕೆಲವೊತ್ತು ಮಳೆ ನೀರಿನಿಂದ ಆವೃತ್ತವಾಗಿತ್ತು.

ಗುರುವಾರ ಸುರಿದ ಭಾರಿ ಮಳೆಯ ಪರಿಣಾಮ ಬೈಪಾಸ್‌ ರಸ್ತೆಯಲ್ಲಿರುವ ಕೆಂಪೇಗೌಡ ವೃತ್ತದ ಬಳಿ ರಾಜಕಾಲುವೆ ಭರ್ತಿಯಾಗಿದ್ದು, ಅಲ್ಲಿ ಶೇಖರಣೆಯಾಗಿದ್ದ ಕಸವನ್ನು ಜೆಸಿಬಿ ಸಹಾಯದಿಂದ ಪುರಸಭೆ ಸಿಬ್ಬಂದಿ ತೆರವುಗೊಳಿಸಲು ಹರ ಸಾಹಸ ಪಟ್ಟರು.

ದೇವನಹಳ್ಳಿ – ಅಕ್ಕುಪೇಟೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕೇಳ ಸೇತುವೆಯಲ್ಲಿ ವಾಹನ ಸವಾರರು ಪರದಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.