ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆ ನಾಟಿಯಿಂದಾಗಿ ಹಲವು ದಶಕಗಳ ಕಾಲದಿಂದ ರೈತರಿಗೆ ಆಸರೆಯಾಗಿದ್ದ ಹಿಪ್ಪುನೇರಳೆ ಬೆಳೆಗೆ ಕಂಟಕ ಎದುರಾಗಿದೆ.
ರೈತರು ವಿವಿಧ ತಳಿ ದ್ರಾಕ್ಷಿ, ತರಕಾರಿ ಬೆಳೆ ಸೇರಿದಂತೆ ವಿವಿಧ ಬಗೆ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ಕೃಷಿ, ತೋಟಗಾರಿಕೆಗೆ ಪರ್ಯಾಯ ಬೆಳೆಯಾಗಿ ರೇಷ್ಮೆಹುಳು ಸಾಕಾಣಿಕೆ ಹಾಗೂ ಉಪಕಸುಬಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ, ಈಚೆಗೆ ಕಡಿಮೆ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾದ ದಾಳಿಂಬೆ ಹೆಚ್ಚಿನ ಪ್ರಮಾಣದ ರೈತರು ಬೆಳೆಯುತ್ತಿದ್ದಾರೆ. ದಾಳಿಂಬೆಗೆ ತಗಲುವ ರೋಗ ನಿಯಂತ್ರಣಕ್ಕಾಗಿ ರೈತರು ಮೂರು ದಿನಗಳಿಗೊಮ್ಮೆ ಬೂಮರ್‌ಗಳಲ್ಲಿ ಸಿಂಪಡಣೆ ಮಾಡುತ್ತಿರುವ ಅಧಿಕವಾದ ರಾಸಾಯನಿಕ ಔಷಧ ಗಾಳಿಯಲ್ಲಿ ತೇಲಿಕೊಂಡು ಬಂದು ಹಿಪ್ಪುನೇರಳೆ ತೋಟದ ಎಲೆಗಳ ಮೇಲೆ ಬೀಳುವುದರಿಂದ ಸೊಪ್ಪು ಬಳಕೆಗೆ ಯೋಗ್ಯವಲ್ಲದ ಕಾರಣ ರೈತರು, ಹಿಪ್ಪುನೇರಳೆ ತೋಟ ನಾಶ ಮಾಡುತ್ತಿದ್ದಾರೆ.
ರೇಷ್ಮೆಹುಳು ಸಾಕಾಣಿಕೆ ಮಾಡುತ್ತಿರುವ ರೈತ ಕುಟುಂಬಗಳು, ರೇಷ್ಮೆ ಹುಳು ತಿಂದು ಬಿಟ್ಟಿರುವ ತ್ಯಾಜ್ಯವನ್ನು ಹೊರಗೆ ಬಿಸಾಡುವುದರ ಬದಲಿಗೆ ರಾಸುಗಳ ಮೇವಿಗೆ ಬಳಕೆ ಮಾಡಿಕೊಂಡು ಹೈನೋದ್ಯಮ ನಡೆಸುತ್ತಿದ್ದರು. ಈಗ ಹುಳುಸಾಕಾಣಿಕೆ ಮಾಡುತ್ತಿರುವ ರೈತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ರೈತರ ಮನೆಗಳಲ್ಲಿ ರಾಸುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಉದ್ಯಮದಲ್ಲಿ ತೊಡಗಿದ್ದ ಯುವಕರು ವಿಮಾನ ನಿಲ್ದಾಣದಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ತಾಲ್ಲೂಕಿನಲ್ಲಿ 2022-24ನೇ ಸಾಲಿನಲ್ಲಿ 2369.69 ಹೆಕ್ಟೇರ್ ಇದ್ದ ಹಿಪ್ಪುನೇರಳೆ ತೋಟಗಳು, 2023-24ನೇ ಸಾಲಿನಲ್ಲಿ 2283.69 ಹೆಕ್ಟೇರ್‌ಗೆ ಇಳಿಕೆಯಾಗಿದೆ. 86ಹೆಕ್ಟೇರ್‌ನಷ್ಟು ಇಳಿಮುಖವಾಗಿದೆ. ಹಿಪ್ಪುನೇರಳೆ ತೋಟ ಕಿತ್ತುಹಾಕದಂತೆ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿಗಳು ರೈತರನ್ನು ಮನವೊಲಿಸುವ ಪ್ರಕ್ರಿಯೆ ಮಾಡುತ್ತಿದ್ದಾರೆ.
2023-24ನೇ ಸಾಲಿನಲ್ಲಿ ದ್ರಾಕ್ಷಿ 946.30 ಹೆಕ್ಟೇರ್ ಇತ್ತು. ದಾಳಿಂಬೆ 488.90 ಹೆಕ್ಟೇರ್ ಇತ್ತು. 2024-25ನೇ ಸಾಲಿಗೆ ದ್ರಾಕ್ಷಿ 1067.90.ಹೆಕ್ಟೇರ್ ಗೆ ಏರಿಕೆಯಾಗಿದ್ದು, ದಾಳಿಂಬೆ 762.44 ಹೆಕ್ಟೇರ್ ಗೆ ಏರಿಕೆಯಾಗಿದೆ. ದ್ರಾಕ್ಷಿ ಬೆಳೆ 121.6 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿದೆ. ದಾಳಿಂಬೆ 273.54 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿದ್ದು, ಹಿಪ್ಪುನೇರಳೆ ಬೆಳೆಯುತ್ತಿದ್ದ ರೈತರು, ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.
ವಾಣಿಜ್ಯ ಬೆಳೆಗಳಾದ ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳಿಗೆ ಸಿಂಪಡಣೆ ಮಾಡುತ್ತಿರುವ ಅಧಿಕ ರಾಸಾಯನಿಕ ಔಷಧಿಗಳ ಪರಿಣಾಮ ಹಿಪ್ಪುನೇರಳೆ ಮಾತ್ರವಲ್ಲದೆ ಹೈನೋದ್ಯಮಕ್ಕೂ ಹೊಡೆತ ಬೀಳುತ್ತಿದೆಕಲ್ಯಾಣ್ ಕುಮಾರ್ ಬಾಬು ರೈತ ಹರಳೂರು ನಾಗೇನಹಳ್ಳಿ
ರೈತರು ಆರ್ಥಿಕ ಸ್ವಾವಲಂಬನೆಗಾಗಿ ವಾಣಿಜ್ಯ ಬೆಳೆ ನಾಟಿ ಮಾಡುತ್ತಿದ್ದಾರೆ. ಡೇರಿಗೆ 900 ಲೀಟರ್ ಹಾಲು ಸರಬರಾಜು ಆಗುತ್ತಿತ್ತು. ರಾಸುಗಳ ಸಂಖ್ಯೆ ಕಡಿಮೆಯಾಗಿ ಒಂದೇ ವರ್ಷದಲ್ಲಿ 400 ಲೀಟರ್ ಗೆ ಇಳಿಕೆಯಾಗಿದೆ.ವೆಂಕಟೇಶಪ್ಪ ಡೇರಿ ಅಧ್ಯಕ್ಷ ಭಟ್ರೇನಹಳ್ಳಿ
ದಾಳಿಂಬೆ ದ್ರಾಕ್ಷಿ ಬೆಳೆಗಳಿಂದ ಹಿಪ್ಪುನೇರಳೆ ತೋಟಗಳಿಗೆ ಹೊಡೆತ ಬೀಳುತ್ತಿರುವುದು ನಿಜ. ಸಾಧ್ಯವಾದಷ್ಟು ರಾಸಾಯನಿಕ ಔಷಧಿ ಸಿಂಪಡಣೆ ಮಾಡುವುದನ್ನು ಕಡಿಮೆ ಮಾಡಿ ರೇಷ್ಮೆ ಉದ್ಯಮಕ್ಕೆ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಲಾಗಿದೆ.ಲಕ್ಷ್ಮಣ್ ಉಪನಿರ್ದೇಶಕ ರೇಷ್ಮೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.