ADVERTISEMENT

ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ಎಂ.ಮುನಿನಾರಾಯಣ
Published 4 ನವೆಂಬರ್ 2024, 4:43 IST
Last Updated 4 ನವೆಂಬರ್ 2024, 4:43 IST
ವಿಜಯಪುರದ ಕೋಲಾರ ಮುಖ್ಯರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮಳೆ ನೀರು ಹೊರಹೋಗದೆ ಗುಂಡಿಗಳಲ್ಲಿ ನಿಂತಿರುವುದು
ವಿಜಯಪುರದ ಕೋಲಾರ ಮುಖ್ಯರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮಳೆ ನೀರು ಹೊರಹೋಗದೆ ಗುಂಡಿಗಳಲ್ಲಿ ನಿಂತಿರುವುದು    

ವಿಜಯಪುರ(ದೇವನಹಳ್ಳಿ): ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ವೆಂಕಟಾಪುರದವರೆಗೂ ಕೋಲಾರ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಂದರೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಎದುರಾಗಿದೆ. ಇಲ್ಲಿ ವಾಸವಾಗಿರುವ ನಾಗರಿಕರು ಹಾಗೂ ಸಣ್ಣ ಹೊಟೇಲ್ ವ್ಯಾಪಾರಸ್ಥರಿಗೆ ತೊಂದರೆ ಎದುರಾಗಿದೆ.

ಕಿರಿದಾಗಿದ್ದ ಕೋಲಾರ ಮುಖ್ಯ ರಸ್ತೆ ಮಧ್ಯಭಾಗದಿಂದ ಎರಡೂ ಕಡೆ 40 ಅಡಿ ವ್ಯಾಪ್ತಿಯಲ್ಲಿ ಕಟ್ಟಡ, ಮರಗಳನ್ನು ತೆರವುಗೊಳಿಸಿ ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿ ನಿರ್ಮಾಣ ಮಾಡಲು ಜೆಸಿಬಿ ಮೂಲಕ ತೆಗೆದಿದ್ದ ಮಣ್ಣು, ಚರಂಡಿ ಪಕ್ಕದಲ್ಲೇ ತುಂಬಿಸಿದ್ದಾರೆ. ಮಳೆ ಬಂದರೆ ನೀರು ಹೊರಗೆ ಹೋಗಲು ಜಾಗವಿಲ್ಲದ ಕಾರಣ ರಸ್ತೆಯಲ್ಲೇ ನಿಲ್ಲುತ್ತಿದೆ.

2024 ರ ಜ.7ರಂದು ₹9.5ಕೋಟಿ ವೆಚ್ಚದಲ್ಲಿ ದ್ವಿಪಥ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದ್ದರು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದರು. ಕಾಮಗಾರಿಗೆ ಚಾಲನೆ ನೀಡಿ 11 ತಿಂಗಳು ಕಳೆದರೂ ಇದುವರೆಗೂ ಚರಂಡಿ ನಿರ್ಮಾಣದ ಕಾಮಗಾರಿ ಅರ್ಧ ಆಗಿರುವುದು ಬಿಟ್ಟರೆ ಇದುವರೆಗೂ ವಿದ್ಯುತ್ ಕಂಬ ಸ್ಥಳಾಂತರವಾಗಿಲ್ಲ. ಕೆಲವು ಮರಗಳನ್ನು ತೆರವುಗೊಳಿಸಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ವ್ಯಾಪಾರ ವಹಿವಾಟು ನಡೆಸದೆ ದೂಳಿನಿಂದ ಮುಕ್ತಿ ಪಡೆಯಲು ಎಷ್ಟು ತಿಂಗಳು ಕಾಯಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದು ಕೋಲಾರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯಾಗಿರುವ ಕಾರಣ ದಿನಕ್ಕೆ ನೂರಾರು ಬಸ್‌, ಸರಕು ಸಾಗಾಣಿಕೆ ವಾಹನಗಳು, ಶಾಲಾ, ಕಾಲೇಜುಗಳ ವಾಹನಗಳು, ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದು ವಾಹನ ಹೋದರೆ ಅದರಿಂದ ಬರುವ ದೂಳು ಅಂಗಡಿಗಳಲ್ಲಿನ ಸಾಮಗ್ರಿ ಮೇಲೆ ದಟ್ಟವಾಗಿ ಕೂರುತ್ತಿದೆ. ಹಿಂದೆ ಹೋಗುವ ದ್ವಿಚಕ್ರ ವಾಹನ ಸವಾರರಿಗಂತೂ ನರಕ ದರ್ಶನವಾಗುತ್ತಿದೆ. ಇಲ್ಲಿ ಕುಳಿತುಕೊಂಡು ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಉಸಿರಾಡುವುದಕ್ಕೂ ಕಷ್ಟವಾಗುತ್ತದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ತಿಂಗಳಾನುಗಟ್ಟಲೇ ಈ ದೂಳಿನಲ್ಲಿ ನಾವು ಬದುಕುವುದಕ್ಕೆ ಆಗುತ್ತಾ? ಎಂದು ವ್ಯಾಪಾರಿ ಐ.ಎಂ.ಶಫಿ ಆಕ್ರೋಶ ವ್ಯಕ್ತಪಡಿಸಿದರು.

ವರ್ಷಾನುಗಟ್ಟಲೇ ಕಾಮಗಾರಿ ನಡೆಸಿದರೆ ಜೀವನ ನಡೆಸುವುದು ಬೇಡವೇ? ಮೊದಲು ಮಳೆ ನೀರು ಹರಿದು ಹೋಗುತ್ತಿತ್ತು. ಈಗ ನೀರೆಲ್ಲವೂ ರಸ್ತೆಯಲ್ಲೇ ನಿಲ್ಲುತ್ತದೆ. ಕನಿಷ್ಠ ಗುಂಡಿ ಮುಚ್ಚಿ, ರಸ್ತೆಗೆ ಟ್ಯಾಂಕರ್‌ ಮೂಲಕ ನೀರು ಹಾಕಿಸಬೇಕು. ಹೀಗೆ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ರಮೇಶ್ ಎಚ್ಚರಿಕೆ ನೀಡಿದರು.

‘ಸಣ್ಣ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆ. ರಸ್ತೆ ಕಾಮಗಾರಿ ನಡೆಸಲು ಆರಂಭವಾದ ನಂತರ ಹೊಟೇಲ್‌ಗೆ ಬಾಡಿಗೆಗೆ ಪಡೆದಿರುವ ಅಂಗಡಿ ಮುಂದೆ ಚರಂಡಿ ತೆಗೆದರು. ಅಂದು ಮುಚ್ಚಿರುವ ಹೊಟೇಲ್ ತೆರೆಯುವುದಕ್ಕೂ ಸಾಧ್ಯವಾಗಲಿಲ್ಲ. ದೂಳಿನ ಕಾರಣದಿಂದ ಗ್ರಾಹಕರು ಬರುವುದಿಲ್ಲ. ಜೀವನ ನಡೆಸುವುದು ಹೇಗೆ’ ಎಂದು ಸ್ಥಳೀಯ ಹೊಟೇಲ್ ಉದ್ಯಮಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ರಸ್ತೆ ದೂಳಿನಿಂದ ಕೂಡಿರುವುದು
ವಾಹನಗಳು ಸಂಚರಿಸುವಾಗ ಎದ್ದಿರುವ ಧೂಳಿನಲ್ಲಿ ಸವಾರರು ಸಾಗುತ್ತಿರುವುದು.
ಪಟ್ಟಣದಲ್ಲಿ ಹಾದು ಹೋಗುವ ಮುಖ್ಯರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಲೋಕೊಪಯೋಗಿ ಇಲಾಖೆಗೆ ಸೇರುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಹಲವು ಬಾರಿ ಪೌರಕಾರ್ಮಿಕರ ಮೂಲಕ ವೆಟ್ ಮಿಕ್ಸ್ ಹಾಕಿಸಲಾಗಿದೆ. ಮಳೆ ನೀರು ಚರಂಡಿಯೊಳಗೆ ಹರಿದು ಹೋಗುವಂತೆ ಮಾಡಲು ವ್ಯವಸ್ಥೆ ಮಾಡಿಸಲಾಗುವುದು.
-ಜಿ.ಆರ್.ಸಂತೋಷ್, ಮುಖ್ಯಾಧಿಕಾರಿ ಪುರಸಭೆ
ಪ್ರತಿನಿತ್ಯ ವಾಹನ ಸಂಚರಿಸುವಾಗ ಟೈರ್‌ಗಳಿಗೆ ಸಿಕ್ಕುವ ಕಲ್ಲು ಸಿಡಿದು ವ್ಯಾಪಾರ–ವಹಿವಾಟು ನಡೆಸಲು ತೊಂದರೆ ಆಗುತ್ತಿದೆ. ತಾತ್ಕಾಲಿಕವಾಗಿ ಗುಂಡಿಗಳಿಗೆ ಡಾಂಬರು ಹಾಕಬೇಕು
-ಐ.ಎಂ.ಶಫಿ ಮೆಕಾನಿಕ್ ವಿಜಯಪುರ
ಕೋಲಾರ ರಸ್ತೆಯಲ್ಲಿರುವ ಹೊಟೇಲ್‌ಗಳಲ್ಲಿ ಕಾಫಿ– ತಿಂಡಿ ತಿನ್ನಲು ಆಗುತ್ತಿಲ್ಲ. ರಸ್ತೆ ವಿಪರೀತ ದೂಳಿನಿಂದ ಕೂಡಿದೆ.
-ಮುನಿಕೃಷ್ಣ ನೂಲುಬಿಚ್ಚಾಣಿಕೆ ಕಾರ್ಮಿಕ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.