ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಘಟ್ಟದ ಬೌದ್ಧ ನೆಲೆಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಬೆಂಗಳೂರಿನ ಮಹಾಬೋಧಿ ಸಂಶೋಧನ ಕೇಂದ್ರದ ಬಿಕ್ಕುಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತಿಹಾಸದ ಮೂಲೆಗೆ ಸೇರಿದಿದೆ ರಾಜಘಟ್ಟ ಬೌದ್ಧರ ನೆಲೆಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡಲು ಮಹಾಬೋಧಿ ಸಂಶೋಧನ ಕೇಂದ್ರ ಮುಂದಾಗಿದೆ ಎಂದು ಮಹಾಭೋದಿ ಸಂಶೋಧನ ನಿರ್ದೇಶಕರಾದ ಬಿಕ್ಕುಬುದ್ಧತ್ತ ಅವರು ಪರಿಶೀಲನೆ ಬಳಿಕ ಹೇಳಿದರು.
ಎರಡು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದ ಪ್ರಮುಖ ಬೌದ್ಧರ ನೆಲೆಯಾಗಿದ್ದ ರಾಜಘಟ್ಟದಲ್ಲಿನ ಬೌದ್ಧ ವಿಹಾರ ಇಂದು ಮಣ್ಣಲ್ಲಿ ಹುದುಗಿ ಹೋಗಿದೆ. ರಾಜಘಟ್ಟದ ಬೌದ್ಧ ವಿಹಾರ ಹಾಗೂ ಚೈತ್ಯವನ್ನ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
2001 ಮತ್ತು 2004 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಉತ್ಖನನ ನಡೆಸಿದ್ದರು. ಈ ವೇಳೆ ಬೌದ್ಧ ವಿಹಾರ ಚೈತ್ಯ ಮತ್ತು ವ್ಯವಸ್ಥಿತವಾತ ನಗರ ಇತ್ತೆಂದು ದಾಖಲಾಗಿದೆ. ಆದರೆ ಈ ತಾಣವನ್ನು ಪಾರಂಪರಿಕ ತಾಣವೆಂದು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಉತ್ಖನನ ಮಾಡಿದ ಸ್ಥಳವನ್ನು ಮತ್ತೆ ಮಣ್ಣಿನಿಂದ ಮುಚ್ಚಲಾಗಿದೆ ಎಂದರು.
ಮೈಸೂರು ವಿಶ್ಯವಿದ್ಯಾಲಯ ನಡೆಸಿದ ಉತ್ಖನನದ ನಂತರ ಬೌದ್ಧ ವಿಹಾರ ಪಳೆಯುಳಿಕೆ ಪತ್ತೆಯಾಗಿವೆ. ಬೆಂಗಳೂರಿನ ಸನಿಹವೇ ಇರುವ ಈ ನೆಲೆಯನ್ನು ಪಾರಂಪಾರಿಕ ತಾಣವಾಗಿ ಅಭಿವೃದ್ಧಿ ಪಡಿಸಬೇಕಿದೆ. ಸುತ್ತಲು ಹಸಿರು, ಬೆಟ್ಟಗಳ ಸಾಲು, ಶಾಂತಿಪ್ರಿಯ ಜನರ ನಡುವೆ ಧ್ಯಾನ ಕೇಂದ್ರ ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ಬೌದ್ಧರ ನೆಲೆಯ ಬಗ್ಗೆ ತಿಳಿಸಬೇಕಿದೆ ಎಂದರು.
ಸ್ಥಳೀಯರಾದ ರಮೇಶ್ ಸಂಕ್ರಾತಿ, ನರಸಿಂಹಮೂರ್ತಿ, ಮಾಳವ ನಾರಾಯಣ್,ರಾಜೇಂದ್ರ, ರಾಜಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.