ದೊಡ್ಡಬಳ್ಳಾಪುರ: ಆರೋಗ್ಯ ರಕ್ಷಣೆಗಾಗಿ ವಿಶ್ವದಾದ್ಯಂತ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ಪಾಲನ್ನು ಮಧುಮೇಹ ಕಾಯಿಲೆ ನಿರ್ವಹಣೆಗಾಗಿಯೇ ಖರ್ಚು ಮಾಡಲಾಗುತ್ತಿದೆ ಎಂದುಅಸಾಂಕ್ರಾಮಿಕ ರೋಗ ನಿಗ್ರಹ ಘಟಕದ ಡಾ.ವೆಂಕಟೇಶ್ ಹೇಳಿದರು.
ಅವರು ನಗರದ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆಯಲ್ಲಿ ಮಾತನಾಡಿದರು.
‘ಜಾಗತಿಕ ಅಭಿವೃದ್ಧಿಗೂ ತೊಡಕಾಗಲು ಕಾರಣವಾಗಿರುವ ಮಧುಮೇಹ ನಿಯಂತ್ರಿಸಲು ಹಾಗೂ ನಿರ್ವಹಣೆ ಮಾಡಲು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ದಿನನಿತ್ಯದ ಜೀವನಶೈಲಿ ಬದಲಿಸಿಕೊಂಡು ನಿಯಮಿತ ಆಹಾರ ಪದ್ಧತಿ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಶಿಸ್ತಾಗಿ ಪಾಲಿಸುವ ಮೂಲಕ ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣ, ರಕ್ತದ ಒತ್ತಡ ಹಾಗೂ ಕೊಲೆಸ್ಟ್ರಾಲ್ ಅಂಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಸಿಹಿ ಹೆಚ್ಚಾಗಿ ತಿಂದ ಮಾತ್ರಕ್ಕೆ ಮಧುಮೇಹ ಬರುತ್ತದೆ ಎನ್ನುವುದಕ್ಕಿಂತಲು ದಿನನಿತ್ಯದ ಎಲ್ಲಾ ರೀತಿಯ ಆಹಾರ ಪದ್ಧತಿಯಲ್ಲೂ ಸೂಕ್ತ ಬದಲಾವಣೆ ಹಾಗೂ ನಿಮಯಗಳ ಪಾಲನೆ ಕಡೆಗೆ ಪ್ರಥಮ ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.
ವಿಶ್ವ ಮಧುಮೇಹ ಜಾಗೃತಿ ಜಾಥಾ ನಡೆಸಲಾಯಿತು. ಸರ್ಕಾರಿ ಆಸ್ಪತ್ರೆಯ ಡಾ.ಚನ್ನಕೇಶವ,
ಡಾ.ವಿಜಯಲಕ್ಷ್ಮಿ, ಡಾ.ಪಾರ್ಥಸಾರಥಿ, ಡಾ.ಮಂಜುನಾಥ್, ಎನ್‌ಸಿಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.