ದೊಡ್ಡಬಳ್ಳಾಪುರ: ಒಂದು ತಿಂಗಳ ಅಂತರದಲ್ಲಿ ಎರಡು ಹಬ್ಬಗಳು ಬಂದು ಹೋಗಿವೆ. ಹಬ್ಬದ ಸಡಗರ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಗರದ ಗಲ್ಲಿ ಗಲ್ಲಿಗಳಲ್ಲಿಯೂ ಕಸದ ರಾಶಿಯನ್ನು ಉಳಿಸಿ ಹೊಗಿದ್ದು, ಮೂಗುಮುಚ್ಚಿಕೊಂಡು ಒಡಾಡುವಂತಾಗಿದೆ. ಹಾಗೆಯೇ ಜಡಿಮಳೆ ಪ್ರಾರಂಭವಾದರೆ ರೋಗ ಹರಡುವ ಭೀತಿಯನ್ನು ಮೂಡಿಸಿದೆ.
ಗಣೇಶ ಹಬ್ಬ ಆಚರಣೆಗೂ ಮುನ್ನ ನಗರಸಭೆ ಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸದಂತೆ, ನಿಗದಿತ ಸ್ಥಳದಲ್ಲಿ ಮಾತ್ರ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡುವಂತೆ ಸಾಕಷ್ಟು ಪ್ರಚಾರವನ್ನು ನಡೆಸಲಾಗಿತ್ತು. ಆದರೆ ಅದು ಕಟ್ಟು ನಿಟ್ಟಾಗಿ ಜಾರಿಗೆ ಬಂದಿದ್ದು ಮಾತ್ರ ಶೇ 30ರಷ್ಟು ಮಾತ್ರ.
ಉಳಿದಂತೆ ಹಬ್ಬದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿದ್ದು, ಗಣೇಶಮೂರ್ತಿಗಳ ವಿಸರ್ಜನೆ ಮಾಡಿದ್ದು, ಪಿಒಪಿ ಗಣೇಶನಮೂರ್ತಿ ಪ್ರತಿಷ್ಠಾಪಿಸಿದ್ದು ನಡೆಯಿತು. ಇದರ ಕುರುಹಾಗಿ ಒಂದು ತಿಂಗಳ ಹಿಂದೆ ವಿಸರ್ಜನೆ ಮಾಡಿರುವ ಪಿಒಪಿ ಹಾಗೂ ಬಾಂಬೆ ಗಣೇಶಮೂರ್ತಿಗಳ ಅರೆಬರೆ ಕರಗಿರುವ ಮೂರ್ತಿಗಳು ಈಗಲೂ ನಾಗರಕೆರೆ ಅಂಗಳದಲ್ಲಿ ಕಾಣಬಹುದಾಗಿದೆ.
ಹಾಗೆಯೇ ನಗರಸಭೆ ವತಿಯಿಂದ ಗಣೇಶಮೂರ್ತಿಗಳ ವಿರ್ಜನೆಗೆ ನಿರ್ಮಿಸಲಾಗಿದ್ದ ನೀರಿನ ಹೊಂಡದಲ್ಲಿ ಇರುವ ರಾಸಾಯನಿಕ ಯುಕ್ತ ನೀರಿನ ಸೂಕ್ತ ವಿಲೇವಾರಿಯೂ ಆಗಿಲ್ಲ.
ಗಣೇಶ ಹಬ್ಬದ ಸಡಗರ ಮುಗಿಯುವಷ್ಟರಲ್ಲಿ ಪ್ರಾರಂಭವಾದ ಆಯುಧಪೂಜೆ, ವಿಜಯದಶಮಿ ನಗರದಲ್ಲಿನ ಕಸದ ರಾಶಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಗಣೇಶನ ಹಬ್ಬಕ್ಕೆ ಹೋಲಿಕೆ ಮಾಡಿದರೆ ಆಯುಧಪೂಜೆ ಸೃಷ್ಟಿಸಿರುವ ಕಸದ ರಾಶಿ ದ್ವಿಗುಣವಾಗಿಸಿದೆ. ಹಾಗೆಯೇ ನಗರದ ಪ್ರತಿ ರಸ್ತೆಗಳ ಬದಿಯಲ್ಲೂ ದೊಡ್ಡ ಹಾಗೂ ಸಣ್ಣ ಕಸದ ರಾಶಿಗಳ ಸಾಲುಗಳು ಹೆಚ್ಚಾಗಿವೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬಾಡಿ ಹೋಗಿರುವ ಬಾಳೆಕಂದು, ಬೂದು ಕುಂಬಳದ ರಾಶಿ ಕಂಡು ಬಂದರೆ, ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆಯಲಾಗಿರುವ ತರಹೇವಾರಿ ಕಸದ ಗುಂಡ್ಡೆಗಳನ್ನು ಕಾಣಬಹುದಾಗಿದೆ. ಪ್ರತಿ ಬಾರಿ ಕಸ ತುಂದು ಹಾಕುವ ಸ್ಥಳಗಳನ್ನು ಗುರುತಿಸಿ ನಗರಸಭೆಯಿಂದ ಕಸದ ರಾಶಿ ಹಾಕದಂತೆ ಹಾಗೂ ದಂಡ ವಿಧಿಸುವ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ಸೂಚನ ಫಲಕಗಳನ್ನು ಅಳವಡಿಸಿರುವ ಸ್ಥಳದಲ್ಲಿಯೇ ಕಸದ ರಾಶಿ ಹೆಚ್ಚಾಗಿದೆ.
ಪ್ರತಿ ದಿನವು ನಗರಸಭೆ ವತಿಯಿಂದ ಮನೆ ಮನೆಗೂ ಕಸ ಸಂಗ್ರಹಕ್ಕೆ ಆಟೊ ಸೇರಿದಂತೆ ಇತರೆ ವಾಹಗಳು ಬರುತ್ತಿವೆ. ಆದರೆ ಕಸವನ್ನು ಆಟೊಗಳಿಗೆ ಕೊಡುವುದಕ್ಕಿಂತಲು ಹೆಚ್ಚು ರಸ್ತೆ ಬದಿಯಲ್ಲಿ ರಾಶಿ ಹಾಕುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಷ್ಟಾದರೂ ಸಹ ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕುವವರಿಗೆ ನಗರಸಭೆಯಿಂದ ಇಲ್ಲಿಯವರೆಗೂ ದಂಡ ವಿಧಿಸಿರುವ ಒಂದೇ ಒಂದು ನಿದರ್ಶನವು ಇಲ್ಲ.
ನಿಂತ ಸುತ್ತಾಟ; ಪರಿಹಾರ ಆಗದ ಸಮಸ್ಯೆ: ಸುಮಾರು ಒಂದುವರೆ ದಶಕದ ಹಿಂದೆ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೂ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಪ್ರತಿ ದಿನವು ವಾರ್ಡ್‌ಗಳ ಸದಸ್ಯರೊಂದಿಗೆ ಸುತ್ತಾಡುತ್ತ ಕಸ, ನೀರಿನ ನಿರ್ವಹಣೆ ಸೇರಿದಂತೆ ಜನರ ಸಣ್ಣ ಪುಟ್ಟ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ಪರಿಪಾಠ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಶಿಸ್ತು, ಪರಿಪಾಟ ಕಣ್ಮರೆಯಾಗಿರುವುದೇ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಹೆಚ್ಚಾಗಲು, ಸಣ್ಣ ಪುಟ್ಟ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ.
ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕಿದರೆ ತೆರವು ಮಾಡುವುದಿಲ್ಲ ಎನ್ನುವ ಸಂದೇಶವನ್ನು ನಗರಸಭೆ ನೀಡಬೇಕಿದೆ. ಪ್ರತಿ ದಿನವು ಮನೆ ಬಾಗಿಲಿಗೆ ಬರುವ ವಾಹನಗಳಿಗೆ ಹಸಿ ಒಣ ಕಸ ವಿಂಗಡಣೆ ಮಾಡಿ ಕಡ್ಡಾಯವಾಗಿ ಕೊಡುವಂತೆ ಮಾಡಬೇಕು. ಹೆಚ್ಚು ಕಸದ ರಾಶಿ ಹಾಕುವ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು. ಹಬ್ಬಗಳ ಸಂದರ್ಭದಲ್ಲಿ ಬಾಳೆಕಂದು ಹೂವು ಸೇರಿದಂತೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ವಿಳಾಸ ಪಡೆದು ಹಬ್ಬದ ವ್ಯಾಪಾರ ಮುಗಿಯುತ್ತಿದ್ದಂತೆ ಯಾವುದೇ ಕಸ ಇಲ್ಲದಂತೆ ತೆರವು ಮಾಡುವ ಅಥವಾ ಕಸ ತೆರವಿಗೆ ನಗರಸಭೆಗೆ ಇಂತಿಷ್ಟು ಹಣ ಪಾವತಿಸುವ ನಿಯಮ ಜಾರಿಯಾಗಬೇಕು.ಮನೋಜ್‌ಕುಮಾರ್ ಚಿಕ್ಕಪೇಟೆ
ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ಹಬ್ಬದ ದಿನಗಳು ಸೇರಿದಂತೆ ಇತರೆ ದಿನಗಳಲ್ಲೂ ರಸ್ತೆ ಬದಿಗಳಲ್ಲಿ ಕಸದ ರಾಶಿ ಹೆಚ್ಚಾಗುತ್ತಿವೆ. ಸ್ವಚ್ಛ ನಗರಸಭೆ ಎಂದು ಘೋಷಣೆ ಮಾಡಿಕೊಂಡರಷ್ಟೇ ಸಾಲದು. ನಗರವನ್ನು ವಾಸ್ತವದಲ್ಲೂ ಸ್ವಚ್ಛವಾಗಿಡಲು ನಿರ್ದಿಷ್ಟ ಕಾರ್ಯಸೂಚಿ ರೂಪಿಸಬೇಕು. ನಗರದಲ್ಲಿ ಯಾರು ಪೌರಾಯುಕ್ತರು ಅಧ್ಯಕ್ಷರು ಎನ್ನುವ ಹೆಸರಷ್ಟೇ ಸಾರ್ವಜನಿಕರಿಗೆ ತಿಳಿದಿದೆ ಹೊರತು ವ್ಯಕ್ತಿಗಳ ಮುಖ ಪರಿಚಯ ಸಾರ್ವಜನಿಕರಿಗೆ ಇಲ್ಲವಾಗಿದೆ. ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರು ವಾರ್ಡ್‌ಗಳಿಗೆ ಭೇಟಿ ನೀಡಬೇಕು.ಅಮರನಾಥ್ ಶಾಂತಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.