ದೊಡ್ಡಬಳ್ಳಾಪುರ: ತಜ್ಞ ವೈದ್ಯರ ಚೀಟಿ ಇಲ್ಲದೆ ಯಾವುದೇ ಔಷಧಿ ಮತ್ತು ರೋಗ ನಿರೋಧಕ ಮಾತ್ರೆಯನ್ನು ಸಾರ್ವಜನಿಕರಿಗೆ ನೀಡಬಾರದು ಎಂದು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಸದಸ್ಯ, ತಾಲ್ಲೂಕು ಸಂಘದ ಸ್ಥಾಪಕ ಅಧ್ಯಕ್ಷ ಎನ್.ಸಿ.ಪಟೇಲಯ್ಯ ಹೇಳಿದರು.
ಕೆಲವೊಂದು ಔಷಧಿ ಹೊರತುಪಡಿಸಿ ಹಳೆಯ ದಿನಾಂಕ ಇರುವ ಚೀಟಿಗಳಲ್ಲಿ ನಮೂದಿಸಿರುವ ಔಷಧಿಗಳನ್ನು ನೀಡುವಂತಿಲ್ಲ ಎನ್ನುವ ನಿಯಮವನ್ನು ಎಲ್ಲಾ ಔಷಧಿ ಮಾರಾಟಗಾರರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈಚೆಗೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ನಂತರ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಔಷಧಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡುತ್ತಿದ್ದಾರೆ. ನಿಯಮ ಮೀರಿದ್ದು ಕಂಡು ಬಂದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಭ್ರೂಣ ಹತ್ಯೆ ಪ್ರಕರಣ ಮತ್ತು ಡೆಂಗಿ ಪ್ರಕರಣ ತಡೆಗಟ್ಟುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ. ಎಂಟಿಪಿ ಕಿಟ್, ಎನ್‌ಡಿಪಿಎಸ್ ಹಾಗೂ ರೋಗ ನಿರೋಧ ಔಷಧಿಗಳನ್ನು ತಜ್ಞ ವೈದ್ಯರ ಅನುಮತಿ ಇಲ್ಲದೇ ನೀಡಬಾರದು. ಗ್ರಾಹಕರು ಸಹ ವೈದ್ಯರ ಸಲಹೆ ಮೇರೆಗೆ ಔಷಧಿ ಖರೀದಿಸಬೇಕು ಎಂದು ಹೇಳಿದರು.
ಸಂಘದ ಗೌರವ ಅಧ್ಯಕ್ಷ ಡಿ.ಎಸ್.ಸಿದ್ದಣ್ಣ, ಕಾರ್ಯದರ್ಶಿ ಟಿ.ಡಿ.ಶ್ಯಾಮಸುಂದರ ಮಾತನಾಡಿ, ತಾಲ್ಲೂಕಿನಲ್ಲಿ 150 ಮೆಡಿಕಲ್‌ಗಳಿವೆ. ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಯಲ್ಲಿ ಸರ್ಕಾರದ ನಿಯಮ ಹಾಗೂ ಆಯಾ ಸಂದರ್ಭಕ್ಕೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಿಂದ ಬರುವ ಸೂಚನೆಗಳ ಬಗ್ಗೆಯು ಎಲ್ಲರಿಗೂ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ನಿಯಮಗಳು ಆನ್‌ಲೈನ್ ಮೂಲಕ ಔಷಧಿ ಮಾರಾಟ ಮಾಡುವವರಿಗೂ ಅನ್ವಯಿಸಬೇಕು. ಕೆಲವೊಂದು ಔಷಧಿಗಳನ್ನು ಸ್ವಚ್ಛ ಹಾಗೂ ತಂಪನೆಯ ವಾತಾವರಣದಲ್ಲಿ ಸಂರಕ್ಷಣೆ ಮಾಡಬೇಕು. ಈ ನಿಯಮವನ್ನು ಆನ್‌ಲೈನ್ ಔಷಧಿ ಮಾರಾಟಗಾರರು ಕಡ್ಡಾಯವಾಗಿ ಪಾಲಿಸಬೇಕು. ಜನರಿಕ್ ಔಷಧಿ ಮಳಿಗೆಯಲ್ಲಿ ಸರ್ಕಾರ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಔಷಧಿಗಳ ಹೊರತು ಇತರೆ ಔಷಧಿ ಮಾರಾಟ ಮಾಡದಂತೆಯು ನಿಯಮ ಜಾರಿಗೆ ತರಲು ಆಗ್ರಹಿಸಿದರು.
ಸಂಘದ ಖಜಾಂಚಿ ರಹೀಮ್‌ಖಾನ್, ಸಂಘದ ಮುಖಂಡರಾದ ಸಿ.ಜನೀಶ್, ಜಗನ್ನಾಥ್, ಹೇಮಂತ್ ಕುಮಾರ್, ಚಂದ್ರಣ್ಣ, ಅಭಿಜಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.