ADVERTISEMENT

ದೊಡ್ಡಬಳ್ಳಾಪುರ | ಹೇಮಂತ್ ಗೌಡ ಹತ್ಯೆ ಪ್ರಕರಣ: 2ನೇ ಆರೋಪಿಗೆ ಪೊಲೀಸರಿಂದ ಗುಂಡೇಟು

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:37 IST
Last Updated 17 ಮೇ 2024, 6:37 IST
   

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಹೋಟೆಲ್ ಬಳಿ ಮೇ 10 ರಂದು ನಡೆದಿದ್ದ ಹೇಮಂತ್ ಗೌಡ ಹತ್ಯೆ ಪ್ರಕರಣದ 2ನೇ ಪ್ರಮುಖ ಆರೋಪಿ ಬಂಧನಕ್ಕೆ ತೆರಳಿದ್ದ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಶ್ರೀನಿವಾಸ್ ಎಂಬುವರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷ ಗುಂಡು ಹಾರಿಸುವ ಮೂಲಕ ಬಂಧಿಸಿರುವ ಪ್ರಕರಣ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಹೇಮಂತ್ ಗೌಡ ಕೊಲೆ ಪ್ರಕರಣದ ಮೊದಲನೇ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಎಂಬುವರ ಸಹೋದರ ಮೇಡಹಳ್ಳಿ ನಿವಾಸಿ ಆರೋಪಿ ಶ್ರೀನಿವಾಸ್ ಹೆಡ್ ಕಾನ್‌ಸ್ಟೆಬಲ್ ಚಂದ್ರಶೇಖರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದಾಗ ಗುಂಡು ಹೊಡೆಯುವುದು ಅನಿವಾರ್ಯವಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಹಳ್ಳಿ ಮನೆಯೊಂದರಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಚಂದ್ರಶೇಖರ್ ಹಿಡಿಯಲು ಮುಂದಾಗಿದ್ದರು. ಆರೋಪಿ ಶ್ರೀನಿವಾಸ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್ ಸ್ಪೆಕ್ಟರ್ ಸಾದಿಕ್ ಪಾಷ ಅವರು ಆರೋಪಿ ಶ್ರೀನಿವಾಸ್ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ADVERTISEMENT

ಹೇಮಂತ್ ಗೌಡ ಹತ್ಯೆ ಪ್ರಕರಣದಲ್ಲಿ ಇಲ್ಲಿವರೆಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಶ್ರೀನಿವಾಸ್, ನರಸಿಂಹಮೂರ್ತಿ ಇಬ್ಬರ ಮೇಲೂ ಈಗಾಗಲೇ ಕೊಲೆ ಯತ್ನ, ಡಕಾಯಿತಿ ದೂರುಗಳು ದಾಖಲಾಗಿದ್ದು ರೌಡಿಶೀಟರ್ ಪಟ್ಟಿಯಲ್ಲೂ ಇದ್ದಾರೆ.

ಈ ಸಂದರ್ಭದಲ್ಲಿ ಡಿವೈಎಸ್ಪಿ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.