ತೂಬಗೆರೆ (ದೊಡ್ಡಬಳ್ಳಾಪುರ): ಮಹಾಶಿವರಾತ್ರಿ ಹಬ್ಬದ ದಿನ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಸಲ್ಲಿಸುವ ಸಡಗರ ಒಂದು ಕಡೆಯಾದೆ, ಮತ್ತೊಂದು ಕಡೆಗೆ ಸೌಂದರ್ಯ ಸ್ಪರ್ಧೆಗೆ ರಾಸುಗಳ ಕೋಡುಗಳಿಗೆ ಬಣ್ಣ ಬಣ್ಣದ ಬಟ್ಟೆ ಟೇಪು ಸುತ್ತುವುದು, ಬಲೂನು ಕಟ್ಟುವುದು, ಕಸೂತಿಯ ಗೌಸಣಿಗೆಯನ್ನು ರಾಸುಗಳ ಮೈ ಮೇಲೆ ಹೊದಿಸುವುದು ಮತ್ತಿತರೆ ಶೃಂಗಾರ ಮಾಡುವಲ್ಲಿ ರೈತರು ನಿರತರಾಗಿದ್ದರು.
–ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದ ಹಳ್ಳಿಕಾರ್ ತಳಿಯ ಹಸು, ಹೋರಿಗಳ ಸೌಂದರ್ಯ ಸ್ಪರ್ಧೆಯಲ್ಲಿ.
ತಾಲ್ಲೂಕು ಸೇರಿದಂತೆ ಎಲ್ಲಾ ಕಡೆಯಲ್ಲೂ ಕೃಷಿಯಲ್ಲಿ ಹೋರಿಗಳ ಬಳಕೆ ಕಡಿಮೆಯಾಗುತ್ತಿದೆ. ಹಾಗೆಯೇ ಹೈನುಗಾರಿಕೆಯಲ್ಲೂ ಮಿಶ್ರತಳಿ ರಾಸುಗಳದ್ದೇ ಪಾರುಪತ್ಯ ಹೆಚ್ಚಾಗಿದೆ. ದೇಶಿಯ ತಳಿಗಳ ಮಹತ್ವದ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಸು ಸೌಂದರ್ಯ ಸ್ಪರ್ಧೆ ನೋಡಲು ತಾಲ್ಲೂಕು ಸೇರಿದಂತೆ ನೆರೆ ಹೊರೆಯ ತಾಲ್ಲೂಕುಗಳಿಂದಲು ನೂರಾರು ರೈತರು ಆಗಮಿಸಿದ್ದರು.
ಸ್ಪರ್ಧೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗವಹಿಸಿ ತಮ್ಮ ಸೌಂದರ್ಯ ಪ್ರದರ್ಶಿಸಿದವು.
ಹಳ್ಳಿಕಾರ್ ರಾಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತೇರಿನ ಬೀದಿ ಬಾಬು ಮಾಲಿಕತ್ವದ ರಾಸುಗಳಿಗೆ ಪ್ರಥಮ, (₹20 ಸಾವಿರ ನಗದು ಮತ್ತು ಫಲಕ) ಕುಂಟನಹಳ್ಳಿ ರುದ್ರೇಗೌಡರ ರಾಸುಗಳಿಗೆ ದ್ವಿತೀಯ ಬಹುಮಾನ (₹10 ಸಾವಿರ ನಗದು ಮತ್ತು ಫಲಕ), ನಾಗೇನಹಳ್ಳಿ ಅಶ್ವತ್ ನಾರಾಯಣ ಮಾಲೀಕತ್ವದ ರಾಸುಗಳಿಗೆ ತೃತೀಯ ಬಹುಮಾನ (₹5 ಸಾವಿರ ನಗದು ಮತ್ತು ಫಲಕ) ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರಾಸುಗಳ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ ಅವರು ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್ ಮಾತನಾಡಿ, ಹಳ್ಳಿಕಾರ್ ತಳಿ ರಾಸು ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತದ ಪರಂಪರೆಯ ಸಂಪತ್ತಾಗಿರುವ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ನಾಗರಾಜು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕನ್ನಡಪರ ಹೋರಾಟಗಾರ ಸಂಜೀವ್‌ನಾಯಕ್, ರೈತ ಮುಖಂಡರಾದ, ತುರುವನಳ್ಳಿ ವಾಸು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ನಗರಸಭ ಸದಸ್ಯ ಎಂ.ಮಲ್ಲೇಶ್, ಪ್ರತಾಪ್, ಮುನಿಯಪ್ಪ, ಮಂಜುನಾಥ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಶ್ರೀಧರ್, ಮುಬಾರಕ್, ನಾಗರಾಜು, ಚೇತನ್, ವಿಕಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.