ADVERTISEMENT

ದೊಡ್ಡಬಳ್ಳಾಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮೇಕ್‌ ಶಿಫ್ಟ್‌ ಆಸ್ಪತ್ರೆ

ನಟರಾಜ ನಾಗಸಂದ್ರ
Published 30 ಅಕ್ಟೋಬರ್ 2024, 5:57 IST
Last Updated 30 ಅಕ್ಟೋಬರ್ 2024, 5:57 IST
ದೊಡ್ಡಬಳ್ಳಾಪುರದಲ್ಲಿ ₹4ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 70 ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2021ರಲ್ಲಿ ಉದ್ಘಾಟಿಸಿದ್ದ ಸಂದರ್ಭ ( ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರದಲ್ಲಿ ₹4ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 70 ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2021ರಲ್ಲಿ ಉದ್ಘಾಟಿಸಿದ್ದ ಸಂದರ್ಭ ( ಸಂಗ್ರಹ ಚಿತ್ರ)   

ದೊಡ್ಡಬಳ್ಳಾಪುರ: ನಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 2021ರಲ್ಲಿ ಎರಡನೇ ಕೋವಿಡ್‌ ಸಂದರ್ಭದಲ್ಲಿ ₹4ಕೋಟಿ ವೆಚ್ಚದಲ್ಲಿ ಲೆನೆವೊ, ಗೊಲ್ಡ್ ಮ್ಯಾನ್ ಸ್ಯಾಚಸ್ ಕಂಪನಿ, ವಿಶ್ವಸಂಸ್ಥೆ, ರಾಜ್ಯ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಲಾಗಿದ್ದ 70 ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆ ಬಳಕೆ ಹಾಗೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಜನವಿರೋಧಿ ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಗೆ ಪ್ರತಿ ದಿನ ಹೊರ ರೋಗಿಗಳು ಸುಮಾರು 400 ರಿಂದ 500 ಜನರವರೆಗೂ ಬರುತ್ತಾರೆ. ವೈದ್ಯರು ಹೊರ ರೋಗಿ ಪರೀಕ್ಷೆ ಮಾಡಲು, ರೋಗಿಗಳು ಕುಳಿತುಕೊಳ್ಳಲು ಸಹ ಸ್ಥಳ ಇಲ್ಲದಷ್ಟು ಕಾರಿಡಾರ್‌ಗಳಲ್ಲೇ ನಿಂತು ಕಾಲಕಳೆಯುವ ಸ್ಥಿತಿ ಇದೆ. ಇನ್ನು ಒಳರೋಗಿಗಳ ದಾಖಲಾತಿಗೆ ಸೂಕ್ತ ಹಾಸಿಗೆ ಕೊಠಡಿ ಸೌಲಭ್ಯ ಕೊರತೆ ಕಾಡುತ್ತಿದೆ. ಇಷ್ಟೆಲ್ಲ ಕೊರತೆ ನೆಪದಲ್ಲಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಇಲ್ಲಿ ನಿರಂತರವಾಗಿದೆ.

ಸರ್ಕಾರ ಹಾಗೂ ಖಾಸಗಿ ಕಂಪನಿಗಳು ಸಾರ್ವಜನಿಕರ ಉಪಯೋಗಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿಕೊಟ್ಟಿರುವ ಸುಸಜ್ಜಿತ ಹೈಟೆಕ್‌ ಮೇಕ್‌ಶಿಫ್ಟ್‌ ಆಸ್ಪತ್ರೆ ಬಳಕೆ ಮಾಡಿಕೊಳ್ಳದೆ ಹಳೆ ಸಾಮಾನು ತುಂಬುವ ಗೋದಾಮು ಮಾಡಿಕೊಳ್ಳಲಾಗಿದೆ. ಇಲ್ಲಿನ ಹೈಟೆಕ್‌ ಮಾದರಿ ಹಾಸಿಗೆಗಳನ್ನಾದರೂ ಬಳಕೆ ಮಾಡಿಕೊಳ್ಳಬಹುದಾಗಿತ್ತು. ಹಾಸಿಗೆ ಎಲ್ಲೆಂದರಲ್ಲಿ ತುಂಬಿರುವ ಹಿನ್ನೆಲೆಯಲ್ಲಿ ಇಲಿಗಳು ಹಾಸಿಗೆಗಳನ್ನು ಕಡಿದು ಹಾಳು ಮಾಡಿವೆ ಎಂದು ಆಸ್ಪತ್ರೆಗೆ ಬರುವ ರೋಗಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಉತ್ತಮ ಚಿಕಿತ್ಸೆ ನೀಡುವ ವೈದ್ಯರು ಇರುವ ಕಾರಣದಿಂದ ನಗರದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೋಗಿಗಳು ಚಿಕಿತ್ಸೆಗೆ ಪ್ರತಿ ದಿನ ಬರುತ್ತಾರೆ. ಇದಕ್ಕಾಗಿ ಹೆಚ್ಚುವರಿ ಕಟ್ಟಡ ಹಾಗೂ ಕೊಠಡಿ ನಿರ್ಮಿಸಿಕೊಡಲಾಗಿದೆ. ಆದರೆ, ಇರುವ ಕೊಠಡಿ ಮತ್ತು ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಬಡವರಿಗೆ ಉತ್ತಮ ಚಿಕಿತ್ಸೆ ನೀಡುವ ಮನಸ್ಥಿತಿ ಇರುವ ಆಡಳಿತದ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು ಈ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್‌ ಆಗ್ರಹಿಸಿದ್ದಾರೆ.

ತಾಲ್ಲೂಕಿನಲ್ಲಿ ವೈದ್ಯಕೀಯ ಸೌಲಭ್ಯ ಉನ್ನತೀಕರಿಸಲು ಸರ್ಕಾರ ಹಾಗೂ ಸ್ಥಳೀಯ ಕೈಗಾರಿಕೆಗಳ ಸಿಎಸ್‌ಆರ್‌ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಇವುಗಳ ಬಳಕೆಯಲ್ಲಿ ಇಲ್ಲಿನ ಆಸ್ಪತ್ರೆ ಆಡಳಿತ ಸಂಪೂರ್ಣ ವಿಫಲರಾಗಿದೆ. ಇದನ್ನು ಸರಿಪಡಿಸದೆ ಕಟ್ಟಡ ನಿರ್ಮಿಸುವ ಕಡೆಗೆ ಮಾತ್ರ ಗಮನವಹಿಸಿದರೆ ಸಾರ್ವಜನಿಕರಿಗೆ ಯಾವುದೇ ರೀತಿ‌ ಉಪಯೋಗ ಇಲ್ಲದಾಗಲಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ ದೂರಿದ್ದಾರೆ.

ಆಸ್ಪತ್ರೆ ವಾರ್ಡ್‌ನಲ್ಲಿ ಅಡ್ಡಾದಿಡ್ಡಿಯಾಗಿ ತುಂಬಲಾಗಿರುವ ಹಾಸಿಗೆಗಳು
ಆಸ್ಪತ್ರೆ ವಾರ್ಡ್‌ಗಳಿಗೆ ಬೀಗ ಹಾಕಲಾಗಿದ್ದು ಪಾಳು ಬಿದ್ದಿವೆ
ದೊಡ್ಡಬಳ್ಳಾಪುರದಲ್ಲಿ ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 70 ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆ ವಾರ್ಡ್‌ಗಳಿಗೆ ಬೀಗಹಾಕಲಾಗಿದ್ದು ಪಾಳುಬಿದ್ದಿದೆ
ದೊಡ್ಡಬಳ್ಳಾಪುರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಕುಳಿತುಕೊಳ್ಳಲು ಸ್ಥಳ ಇಲ್ಲದೆ ಕಾರಿಡಾರ್‌ನಲ್ಲಿಯೇ ನಿಂತಿರುವುದು   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.